ನೂತನ ನಕಾಶೆಯಲ್ಲಿ ನೇಪಾಳದ ಗಡಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ: ಭಾರತ

Update: 2019-11-07 16:56 GMT

ಹೊಸದಿಲ್ಲಿ, ನ.7: ಭಾರತದ ನೂತನ ರಾಜಕೀಯ ನಕಾಶೆಯಲ್ಲಿ ನೇಪಾಳದ ಜೊತೆಗಿನ ತನ್ನ ಗಡಿಯಲ್ಲಿ ಯಾವುದೇ ಬದಲಾವಣೆ ಅಥವಾ ಪರಿಷ್ಕರಣೆಯನ್ನು ಮಾಡಲಾಗಿಲ್ಲವೆಂದು ವಿದೇಶಾಂಗ ಸಚಿವಾಲಯವು ಗುರುವಾರ ಸ್ಪಷ್ಟಪಡಿಸಿದೆ.

ತನ್ನ ಗಡಿಭಾಗವನ್ನು ಭಾರತದ ಪ್ರಾಂತದ ಜೊತೆಗೆ ಸೇರ್ಪಡೆಗೊಳಿಸಿದೆಯೆಂದು ಆರೋಪಿಸಿ ನೇಪಾಳ ಸರಕಾರವು ಕಟುವಾದ ಹೇಳಿಕೆಯೊಂದನ್ನು ನೀಡಿದ ಮರುದಿನವೇ ಅದು ಈ ಸ್ಪಷ್ಟನೆ ನೀಡಿದೆ. ‘‘ನಮ್ಮ ನಕಾಶೆಯು ನಿಖರವಾಗಿ ಭಾರತದ ಸಾರ್ವಭೌಮ ಪ್ರಾಂತವನ್ನು ಬಿಂಬಿಸುತ್ತದೆ. ನೂತನ ನಕಾಶೆಯಲ್ಲಿ ನೇಪಾಳದ ಜೊತೆಗಿನ ನಮ್ಮ ಗಡಿಯನ್ನು ಯಾವುದೇ ರೀತಿಯಲ್ಲಿ ಪರಿಷ್ಕರಿಸಿಲ್ಲ. ನೇಪಾಳದ ಜೊತೆಗಿನ ಗಡಿ ಗುರುತಿಸುವಿಕೆೆ ಪ್ರಕ್ರಿಯೆಯು ಈಗ ಅಸ್ತಿತ್ವದಲ್ಲಿರುವ ಕಾರ್ಯತಂತ್ರದ ಪ್ರಕಾರ ನಡೆಯುತ್ತಿದೆ’’ ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

  ಜಮ್ಮಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ರಚನೆಯಾದ ಬಳಿಕ ಕೇಂದ್ರ ಸರಕಾರವು ಹೊಸತಾಗಿ ಪ್ರಕಟಿಸಿದ ಭಾರತದ ರಾಜಕೀಯ ಭೂಪಟದಲ್ಲಿ ಕಾಲಾಪಾನಿ ಪ್ರದೇಶವನ್ನು ಉತ್ತರಖಂಡ ಜಿಲ್ಲೆಯ ಪಿತೋರ್‌ಗಢ ಜಿಲ್ಲೆಯ ವ್ಯಾಪ್ತಿಯಲ್ಲಿ ತೋರಿಸಲಾಗಿತ್ತು. ಆದರೆ ನೇಪಾಳವು ಕಾಲಾಪಾನಿ ಪ್ರದೇಶವು ದಾರ್ಚುಲಾ ಜಿಲ್ಲೆಯ ಭಾಗವೆಂದು ಪ್ರತಿಪಾದಿಸುತ್ತಿದೆ.

  ‘‘ನಿಕಟ ಹಾಗೂ ಸ್ನೇಹಯುತ ದ್ವಿಪಕ್ಷೀಯ ಬಾಂಧವ್ಯಗಳನ್ನು ವೃದ್ಧಿಸುವ ಆಶಯದೊಂದಿಗೆ ಉಭಯ ದೇಶಗಳ ಗಡಿವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಲು ಭಾರತಕ್ಕಿರುವ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಎರಡೂ ದೇಶಗಳ ನಡುವೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆಯೆಂದು ಅದು ನೇಪಾಳವನ್ನು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News