ಕ್ಯಾನ್ಸರ್ ಬಗ್ಗೆ ಜಾಗೃತಿ ಹೆಚ್ಚಾಗಬೇಕಿದೆ: ಡಾ.ಸಿ.ರಾಮಚಂದ್ರ

Update: 2019-11-07 17:36 GMT

ಬೆಂಗಳೂರು, ನ.7 : ಕ್ಯಾನ್ಸರ್ ಕಾಯಿಲೆಯನ್ನು ಆರಂಭದಲ್ಲಿಯೇ ಕಂಡು ಹಿಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಹೇಳಿದ್ದಾರೆ.

ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿಯ ಕೊರತೆ ಅಧಿಕವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಜಾಗೃತಿಗೊಳಿಸಿದರೆ, ಅರಿವು ಮೂಡಿಸುವ ಮೂಲಕ ಕ್ಯಾನ್ಸರ್ ನಿರ್ಮೂಲನೆ ಮಾಡಲು ಮುಂದಾಗಬೇಕಿದೆ ಎಂದರು.

ಭಾರತದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡಗಳು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆೆಗಳು. ಇವುಗಳ ಸರಣಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳು ಸೇರುತ್ತಿವೆ. ಕಿದ್ವಾಯಿ ಸಂಸ್ಥೆಯಲ್ಲಿ ದಿನಕ್ಕೆ 1200 ರಿಂದ 1500 ರವರೆಗೂ ಹೊರ ರೋಗಿಗಳ ವಿಭಾಗದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಯುರೋಪ್ ತಂತ್ರಜ್ಞಾನ ಅಳವಡಿಕೆ: ಯುರೋಪ್ ಆಸ್ಪತ್ರೆಗಳಲ್ಲಿರುವ ಸಿಟಿ ಸಿಮ್ಯುಲೇಟರ್ ತಂತ್ರಜ್ಞಾನ ಕಿದ್ವಾಯಿ ಸಂಸ್ಥೆಯಲ್ಲಿ ಅಳವಡಿಸಲಾಗಿದೆ. ನಮ್ಮ ದೇಶದಲ್ಲಿ ಯಾವುದೇ ಆಸ್ಪತೆಯಲ್ಲಿ ಈ ನೂತನ ತಂತ್ರಜ್ಞಾನ ಇಲ್ಲ. ಬಡ ರೋಗಿಗಳ ಅನುಕೂಲಕ್ಕಾಗಿ ಹೊಸ ತಂತ್ರಜ್ಞಾನಗಳಾದ ಸಿಟಿ ಸ್ಕ್ಯಾನ್, ಪೆಟ್ ಸ್ಕ್ಯಾನ್, ಲೇಸರ್ ಥೆರಪಿ ಮುಂತಾದವುಗಳನ್ನು ಇಲ್ಲಿ ಕಾಣಬಹುದಾಗಿದೆ.

ಪೌರಕಾರ್ಮಿಕರಿಗೆ ಕ್ಯಾನ್ಸರ್ ಶಂಕೆ: ಇತ್ತೀಚಿಗೆ ಕಿದ್ವಾಯಿ ಸಂಸ್ಥೆಯು ನಡೆಸಿದ ಬಿಬಿಎಂಪಿ ಪೌರ ಕಾರ್ಮಿಕರಿಗೆ ಐದು ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 450 ಮಂದಿಯಲ್ಲಿ 80ಕ್ಕೂ ಹೆಚ್ಚು ಮಂದಿಗೆ ಕ್ಯಾನ್ಸರ್ ಇರುವ ಶಂಕೆ ಇದೆ ಎಂದು ಅಂದಾಜಿಸಲಾಗಿದೆ. ಅವರಿಗೆ ಕಿದ್ವಾಯಿಯಲ್ಲಿ ಮುಂದಿನ ಹೆಚ್ಚುವರಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ. ಶಿಬಿರಗಳನ್ನು ನಡೆಸಲು ಬಿಬಿಎಂಪಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಎಲ್ಲ ವಾರ್ಡ್‌ಗಳಲ್ಲಿರುವ ಪೌರ ಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಶೀಘ್ರ: ಕಿದ್ವಾಯಿ ಆಸ್ಪತ್ರೆಯಲ್ಲಿರುವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು ಪಡೆಯಲು ಯಾರೂ ಮುಂದಾಗದ ಕಾರಣದಿಂದ ತ್ಯಾಜ್ಯ ನಿರ್ವಹಣಾ ಘಟಕ ಶೀಘ್ರದಲ್ಲೆ ನಿರ್ಮಾಣವಾಗಲಿದೆ. ಈ ಮೂಲಕ ವೈದ್ಯಕೀಯ ತ್ಯಾಜ್ಯವನ್ನು ವಿಂಗಡಣೆ ಮಾಡಿ ಅದನ್ನು ಉಪಯುಕ್ತ ವಸ್ತುಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News