ಬೆಂಗಳೂರು: ಕಿಡಿಗೇಡಿಗಳಿಂದ ಕಾರುಗಳ ಗಾಜುಗಳ ಜಖಂ

Update: 2019-11-07 18:10 GMT

ಬೆಂಗಳೂರು,ನ.7: ಬೈಕ್‌ಗಳಲ್ಲಿ ಸುತ್ತಾಡುತ್ತಾ ಕಿಡಿಗೇಡಿಗಳು ವಿಜಯನಗರ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾಹನಗಳ ಗಾಜುಗಳನ್ನು ಪುಡಿ ಮಾಡಿ, ಅಟ್ಟಹಾಸ ಮೆರೆದಿದ್ದಾರೆ.

ಎರಡೂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಅಡ್ಡಾಡುತ್ತಾ ಕೆಲ ಕಿಡಿಗೇಡಿಗಳು 21 ಕ್ಕೂ ಅಧಿಕ ವಾಹನಗಳ ಗಾಜುಗಳನ್ನು ಜಖಂ ಮಾಡಿದ್ದಾರೆ. ಈ ಸಂಬಂಧ ಎರಡೂ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಕ್ರಮಕ್ಕೆ ಮುಂದಾಗಿದ್ದಾರೆ.

ವಿಜಯನಗರದ ವ್ಯಾಪ್ತಿಯ ಸಂಪಿಗೆ ಬಡಾವಣೆಯಲ್ಲಿ ತಡರಾತ್ರಿ ಕಿಡಿಗೇಡಿಗಳು ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುತ್ತಾ ರಸ್ತೆಬದಿ ಹಾಗೂ ಮನೆ ಮುಂದೆ ನಿಲ್ಲಿಸಿದಂತಹ 14 ಕಾರುಗಳು ಹಾಗೂ ಒಂದು ಲಗೇಜ್ ಆಟೋದ ಗಾಜನ್ನು ಒಡೆದು ಹಾನಿಗೊಳಿಸಿ ಪರಾರಿಯಾಗಿದ್ದಾರೆ.

ಅದೇ ರೀತಿಯಲ್ಲಿ ಬ್ಯಾಟರಾಯನಪುರ ವ್ಯಾಪ್ತಿಯ ಕಸ್ತೂರ ಬಾ ನಗರದಲ್ಲಿ ರಾತ್ರಿ ಮೂವರು ದುಷ್ಕರ್ಮಿಗಳು ಒಂದೇ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಾ 6 ಕಾರುಗಳ ಗಾಜುಗಳನ್ನು ಪುಡಿ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೆ, ಕಿಡಿಗೇಡಿಗಳು ವಿವಿಧ ಕಡೆ ಸುತ್ತಾಡಿ ಮತ್ತಷ್ಟು ಕಾರುಗಳ ಗಾಜುಗಳನ್ನು ಒಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆಯಾ ಪ್ರದೇಶಗಳ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿರುವುದನ್ನು ಪಡೆದುಕೊಂಡಿದ್ದು, ದುಷ್ಕರ್ಮಿಗಳ ಬಂಧನಕ್ಕೆ ವಿಜಯನಗರ ಉಪ ವಿಭಾಗದ ಎಸಿಪಿ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News