ಅಯೋಧ್ಯೆ ವಿವಾದ ನಡೆದು ಬಂದದ್ದು ಹೀಗೆ..

Update: 2019-11-09 03:40 GMT

ಹೊಸದಿಲ್ಲಿ/ ಅಯೋಧ್ಯೆ, ನ.9: ಸ್ವತಂತ್ರ ಭಾರತದಲ್ಲಿ ಬಾಬರಿ ಮಸೀದಿ- ರಾಮಮಂದಿರ ಜಮೀನು ವಿವಾದದ ಬಗ್ಗೆ ಮೊದಲ ದಾವೆ ಹೂಡಿ 70 ವರ್ಷಗಳ ಬಳಿಕ ಇಂದು ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶದ ಚಿತ್ತ ಸುಪ್ರೀಂಕೋರ್ಟ್ ನತ್ತ ನೆಟ್ಟಿದೆ.

1528ರಲ್ಲಿ ಬಾಬರಿ ಮಸೀದಿ ನಿರ್ಮಾಣವಾದಾಗಿನಿಂದ ಇಲ್ಲಿನ ಘಟನಾವಳಿಗಳ ಪಕ್ಷಿನೋಟ ಇಲ್ಲಿದೆ. ದೇವಾಲಯವೊಂದನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬ ವಾದ ಹಿಂದೂ ಸಂಘಟನೆಗಳದ್ದು. 1853ರಲ್ಲಿ ಈ ಜಮೀನಿಗೆ ಸಂಬಂಧಿಸಿದಂತೆ ಮೊದಲ ಕೋಮು ಗಲಭೆ ದಾಖಲಾಗಿದೆ. ಈ ನಿವೇಶನದ ಸುತ್ತ ಬ್ರಿಟಿಷ್ ಅಧಿಕಾರಿಗಳು ಬೇಲಿ ನಿರ್ಮಿಸಿ, ಹಿಂದೂ ಹಾಗೂ ಮುಸ್ಲಿಮರು ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಲು ಜಾಗ ನಿಗದಿಪಡಿಸಿದರು. ಇದು 90 ವರ್ಷಗಳ ವರೆಗೂ ಇತ್ತು. 1949ರಲ್ಲಿ ಮಸೀದಿಯ ಆವರಣದೊಳಗೆ ರಾಮನ ವಿಗ್ರಹ ಇಟ್ಟ ಬಳಿಕ ಜಾಗದ ವಿವಾದ ಹುಟ್ಟಿಕೊಂಡಿದೆ.

1984ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಿಂದೂ ಸಮಿತಿ ರಚಿಸಲಾಗಿದೆ. ಮೂರು ವರ್ಷ ಬಳಿಕ ಜಿಲ್ಲಾ ನ್ಯಾಯಾಲಯ ಆದೇಶ ನೀಡಿ ಮಸೀದಿಯ ಗೇಟುಗಳನ್ನು ತೆರೆದು ವಿವಾದಿತ ಕಟ್ಟಡದಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ತೀರ್ಪು ನೀಡಿತು. ಆಗ ಬಾಬರಿ ಮಸೀದಿ ಕ್ರಿಯಾ ಸಮಿತಿಯನ್ನು ಮುಸ್ಲಿಮರು ರಚಿಸಿಕೊಂಡರು. ವಿವಾದಿತ ಕಟ್ಟಡದ ಪಕ್ಕದಲ್ಲಿ 1989ರಲ್ಲಿ ದೇವಾಲಯಕ್ಕೆ ಅಡಿಗಲ್ಲು ಹಾಕಲಾಯಿತು.

1990ರಲ್ಲಿ ಬಿಜೆಪಿ ಅಧ್ಯಕ್ಷ ಎಲ್.ಕೆ.ಅಡ್ವಾಣಿಯವರ ರಥಯಾತ್ರೆ ಬಳಿಕ ವಿಎಚ್‌ಪಿ ಕಾರ್ಯಕರ್ತರು ಬಾಬ್ರಿ ಮಸೀದಿಯನ್ನು ಭಾಗಶಃ ಕೆಡವಿದರು. 1992ರ ಡಿಸೆಂಬರ್ 6ರಂದು ಸಂಘ ಪರಿವಾರದ ಕಾರ್ಯಕರ್ತರು ಮಸೀದಿ ಕೆಡವಿದರು. ದೇಶಾದ್ಯಂತ ಕೋಮುಗಲಭೆ ನಡೆಯಿತು. ಘಟನೆ ಬಗ್ಗೆ ತನಿಖೆಗೆ ಲಿಬ್ಹರಾನ್ ಸಮಿತಿ ನೇಮಕವಾಯಿತು. 2009ರಲ್ಲಿ ವರದಿ ನೀಡಿದ ಸಮಿತಿ ಅಡ್ವಾಣಿ ಹಾಗೂ ವಾಜಪೇಯಿ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಇದಕ್ಕೆ ಕಾರಣ ಎಂದು ಹೇಳಿತು.

ಮಸೀದಿ ಧ್ವಂಸಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ವಿಚಾರಣೆ ಎದುರಿಸುವಂತೆ ಏಳು ಮಂದಿ ಬಿಜೆಪಿ ಮುಖಂಡರಿಗೆ ನ್ಯಾಯಾಲಯ ಸೂಚಿಸಿತು. ಮುರಳಿ ಮನೋಹರ ಜೋಶಿ ಹಾಗೂ ಉಮಾಭಾರತಿ ವಿಚಾರಣೆ ಲಕ್ನೋ ಕೋರ್ಟ್‌ನಲ್ಲಿ ನಡೆಯಿತು. 2002ರ ಎಪ್ರಿಲ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮೂವರು ನ್ಯಾಯಮೂರ್ತಿಗಳು ವಿವಾದಿತ ಜಾಗದ ವ್ಯಾಜ್ಯದ ವಿಚಾರಣೆ ಆರಂಭಿಸಿದರು. 2010ರ ಸೆಪ್ಟೆಂಬರ್‌ನಲ್ಲಿ ತೀರ್ಪು ಹೊರಬಂತು. ಮಸೀದಿಯ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಿ, ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಉತ್ತರ ಪ್ರದೇಶದ ಸುನ್ನಿ ಕೇಂದ್ರೀಯ ವಕ್ಫ್‌ ಬೋರ್ಡ್‌ಗೆ ನೀಡುವಂತೆ ತೀರ್ಪು ನೀಡಲಾಯಿತು. ತಿಂಗಳ ಒಳಗಾಗಿ ಇದನ್ನು ಪ್ರಶ್ನಿಸಿ ಹಿಂದೂ ಹಾಗೂ ಮುಸ್ಲಿಂ ಗುಂಪುಗಳು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದವು.

2011ರಲ್ಲಿ ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿತು. ಸಂಧಾನ ಪ್ರಕ್ರಿಯೆ ವಿಫಲವಾದ ಬಳಿಕ, ಈ ವರ್ಷದ ಆಗಸ್ಟ್ 6ರಂದು ಪ್ರತಿ ದಿನ ಈ ಪ್ರಕರಣದ ವಿಚಾರಣೆ ನಡೆಸುವ ಸಲುವಾಗಿ ಐದು ಮಂದಿಯ ಸಂವಿಧಾನ ಪೀಠವನ್ನು ರಚಿಸಲಾಯಿತು. 40 ದಿನಗಳ ಸತತ ವಿಚಾರಣೆ ಅಕ್ಟೋಬರ್ 16ರಂದು ಮುಗಿದು, ನವೆಂಬರ್ 17ರೊಳಗೆ ತೀರ್ಪು ನೀಡುವುದಾಗಿ ಘೋಷಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News