ಇಮ್ರಾನ್ ಕುಟುಂಬದ ಜತೆಗಿನ ಸುದೀರ್ಘ ನಂಟು ಬಿಚ್ಚಿಟ್ಟ ಪಂಜಾಬ್ ಸಿಎಂ !

Update: 2019-11-11 04:04 GMT
ಅಮರೀಂದರ್ ಸಿಂಗ್

ಚಂಡೀಗಢ: ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಹೋಗುವ ಸಂದರ್ಭ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಶನಿವಾರ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಜತೆಗೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು.

ಈ ಅವಧಿಯಲ್ಲಿ ಇಬ್ಬರೂ ಕ್ರಿಕೆಟ್ ಬಗ್ಗೆ ಪರಸ್ಪರ ಮಾತನಾಡಿಕೊಂಡರು. ಇಮ್ರಾನ್ ಖಾನ್ ಅವರ ಮಾವ ಪಾಟಿಯಾಲ ಮತ್ತು ಭಾರತ ತಂಡದ ಪರವಾಗಿ ತಮ್ಮ ತಂದೆಯ ನಾಯಕತ್ವದಲ್ಲಿ 1934-35ರಲ್ಲಿ ಆಡಿದ್ದನ್ನು ಕ್ಯಾಪ್ಟನ್ ಮೆಲುಕು ಹಾಕಿಕೊಂಡರು.

ಕರ್ತಾರ್‌ಪುರಕ್ಕೆ ಐತಿಹಾಸಿಕ ಯಾನ ಕೈಗೊಂಡ ಮೊದಲ ತಂಡದಲ್ಲಿ ಸಿಂಗ್ ಅವರೂ ಇದ್ದರು. ಪಾಕಿಸ್ತಾನದ ಪ್ರಧಾನಿ ಹಾಗೂ ವಿದೇಶಾಂಗ ಸಚಿವರು ಕೂಡಾ ಕರ್ತಾರ್‌ಪುರ ಕಾರಿಡಾರ್‌ನ ಅಂತರ್ ರಾಷ್ಟ್ರೀಯ ಗಡಿಯ ಝೀರೊಪಾಯಿಂಟ್‌ನಲ್ಲಿ ಸೇರಿಕೊಂಡರು.

ಈ ಅಂಶವನ್ನು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಪ್ರಕಟಣೆ ಬಹಿರಂಗಡಿಸಿದೆ. "ಕ್ರಿಕೆಟ್, ಭಾರತೀಯರು ಹಾಗೂ ಪಾಕಿಸ್ತಾನಿಯರನ್ನು ಬೆಸೆಯುವ ಸೂತ್ರ" ಎಂದು ಪ್ರಕಟಣೆ ಬಣ್ಣಿಸಿದೆ. "ಇದು ಎರಡೂ ಕಡೆಗಳ ಬಂಧ. ಆದರೆ ಈ ಬಸ್ ಪ್ರಯಾಣ ಅಂಥ ಒಂದು ಅಪೂರ್ವ ಬಂಧ. ಈ ಇಬ್ಬರೂ ಇದುವರೆಗೆ ಪರಸ್ಪರ ಭೇಟಿ ಮಾಡದಿದ್ದರೂ, ಪರಸ್ಪರ ಪರಿಚಿತರಲ್ಲದಿದ್ದರೂ, ಈ ವೇಳೆ ಎರಡೂ ಕುಟುಂಬಗಳ ನಡುವಿನ ಸಂಬಂಧದ ವಿಶೇಷ ಬೆಸುಗೆ ಬೆಳಕಿಗೆ ಬಂತು"

ಮುಖ್ಯಮಂತ್ರಿ ಹಳೆಯ ನೆನಪು ಮೆಲುಕು ಹಾಕಿಕೊಂಡಾಗ ಈ ಕ್ರಿಕೆಟ್ ಬಂಧ ಮತ್ತಷ್ಟು ಬಿಗಿಯಾಯಿತು. "ಇಮ್ರಾನ್ ಖಾನ್ ಅವರ ಮಾವ ಜಹಾಂಗೀರ್ ಖಾನ್ ಅವರು ಮೊಹ್ಮದ್ ನಿಸಾರ್, ಲಾಲಾ ಅಮರನಾಥ್ ಮತ್ತು ವೇಗದ ಬೌಲರ್ ಅಮರ್ ಸಿಂಗ್ ಮತ್ತು ವಝೀರ್ ಅಲಿ, ಅಮೀರ್ ಅಲಿ ಜತೆ ಪಾಟಿಯಾಲಾ ತಂಡದ ಪರವಾಗಿ ಆಡಿದ್ದರು.

ಕ್ಯಾಪ್ಟನ್ ಅಮರೀಂದರ್ ಅವರ ತಂದೆ ಮಹಾರಾಜ ಯದುವೀಂದ್ರ ಸಿಂಗ್ ಅವರು 1934-35ರಲ್ಲಿ ಭಾರತ ತಂಡದ ನಾಯಕರಾಗಿದ್ದಾಗ ಈ ತಂಡದಲ್ಲಿ ಈ ಏಳು ಮಂದಿ ಆಟಗಾರರು ಆಡಿದ್ದರು ಎಂಬ ಮಾಹಿತಿ ಹಂಚಿಕೊಂಡಾಗ ಇಮ್ರಾನ್ ಇದನ್ನು ಕೇಳಿ ಸಂಭ್ರಮಿಸಿದರು" ಎಂದು ಪ್ರಕಟಣೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News