ಘಟಿಕೋತ್ಸವ ಕಾರ್ಯಕ್ರಮದಂದೇ ಜೆಎನ್‍ಯು ವಿದ್ಯಾರ್ಥಿಗಳ ಭಾರೀ ಪ್ರತಿಭಟನೆ: ಪೊಲೀಸರಿಂದ ಜಲಫಿರಂಗಿ ಬಳಕೆ

Update: 2019-11-11 09:40 GMT
Photo: twitter.com/IndianExpress

ಹೊಸದಿಲ್ಲಿ, ನ.11:  ಹಾಸ್ಟೆಲ್ ಶುಲ್ಕ ಏರಿಕೆ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಜವಾಹರಲಾಲ್ ನೆಹರೂ  ವಿಶ್ವವಿದ್ಯಾಲಯ ಆಡಳಿತದ ವಿರುದ್ಧ ಇಂದು  ಸಾವಿರಾರು ವಿದ್ಯಾರ್ಥಿಗಳು ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ವಿವಿ ಘಟಿಕೋತ್ಸವ ಸಮಾರಂಭದ ಸ್ಥಳದ ಹೊರಗೆ ಈ ಪ್ರತಿಭಟನೆ ನಡೆಯುತ್ತಿದೆ. ಅತ್ತ ಉಪರಾಷ್ಟ್ರಪತಿಗಳ ಭಾಷಣ ಮುಂದುವರಿದಿರುವಂತೆಯೇ ಇತ್ತ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಜಲ ಫಿರಂಗಿಗಳನ್ನು ಉಪಯೋಗಿಸಿದ್ದಾರೆ. ಸುಮಾರು 300ರಿಂದ 400 ವಿದ್ಯಾರ್ಥಿಗಳು ಈ ಜಲಫಿರಂಗಿ ವಾಹನಗಳ ಮೇಲೇರಿ ತಡೆಯಲು  ಆರಂಭದಲ್ಲಿ ಯತ್ನಿಸಿದ್ದರು.

ಪ್ರತಿಭಟನೆಯಿಂದಾಗಿ  ಜೆಎನ್‍ಯು ಕ್ಯಾಂಪಸ್ ಹೊರಗಿನ ರಸ್ತೆಯಲ್ಲಿ ವಾಹನ ಸಂಚಾರ ಕೂಡ ಬಾಧಿತವಾಗಿತ್ತು. ಕಳೆದ ಹದಿನೈದು ದಿನಗಳಿಂದ ವಿದ್ಯಾರ್ಥಿಗಳು ಹಲವು ನಿರ್ಬಂಧಗಳನ್ನು ಪ್ರಸ್ತಾಪಿಸಲಾಗಿರುವ ಕರಡು ಹಾಸ್ಟೆಲ್ ನೀತಿಯ ವಿರುದ್ಧ ಪ್ರತಿಭಟಿಸುತ್ತಿದ್ದು  ಈ ಪ್ರತಿಭಟನೆಯಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಈಗ ಭಾಗವಹಿಸುತ್ತಿದ್ದಾರೆ. ಕರಡು ನೀತಿಯಲ್ಲಿ ಉಲ್ಲೇಖಿಸಲಾಗಿರುವ ವಸ್ತ್ರ ಸಂಹಿತೆ ನಿರ್ಬಂಧಗಳ ವಿರುದ್ಧವೂ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಸಭಾಂಗಣದಲ್ಲೇ ಬಾಕಿಯಾಗಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News