ಬೆಂಗಳೂರು: ಕೇಂದ್ರ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2019-11-11 13:00 GMT

ಬೆಂಗಳೂರು, ನ.11: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿಗಳು ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್, ಸೋಮವಾರ ನಗರದ ಟೌನ್‌ಹಾಲ್ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಿತು.

ಕೇಂದ್ರ ಸರಕಾರದ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ. ಆರ್ಥಿಕ ತಜ್ಞರು ನೀಡುವ ಸಲಹೆಗಳಿಗೆ ಕೇಂದ್ರ ಸರಕಾರ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇವತ್ತು ದೇಶದಲ್ಲಿ ಹಸಿವಿನಿಂದ ನರಳುವವರು ಹಾಗೂ ಬಡವರ ಸಂಖ್ಯೆ ಹೆಚ್ಚಾಗಲು ಬಜೆಪಿ ಸರಕಾರದ ತಪ್ಪು ಆರ್ಥಿಕ ನೀತಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯೇ ಕಾರಣ. ನಿಮಗೆ ಮಾನ ಮರ್ಯಾದೆ ಇದ್ದರೆ ಈಗಲಾದರೂ ಎಚ್ಚರಗೊಳ್ಳಿ. ನಾವು ನಿಮ್ಮನ್ನು ಅಧಿಕಾರದಿಂದ ಕಿತ್ತು ಹಾಕಲು ಹೋಗುವುದಿಲ್ಲ. ಜನರೇ ನಿಮ್ಮನ್ನು ಮುಂದಿನ ಚುನಾವಣೆಯಲ್ಲಿ ಕಿತ್ತು ಹಾಕುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಸರಕಾರವು ಬಹುಮುಖ ಬೆಲೆಯ ನೋಟುಗಳ ಅಮಾನ್ಯ ಮಾಡುವ ಏಕಪಕ್ಷೀಯ ತೀರ್ಮಾನ ಕೈಗೊಂಡ ಪರಿಣಾಮ, ಹಲವಾರು ಕ್ಷೇತ್ರಗಳು ಸಮಸ್ಯೆಗಳು ಎದುರಿಸುತ್ತಿವೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಕೈಗೊಂಡ ಈ ನಿರ್ಧಾರದಿಂದಾಗಿ, ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮಹಾರಾಷ್ಟ್ರದಂತೆ ನಮ್ಮ ರಾಜ್ಯದಲ್ಲಿಯೂ ಪಕ್ಷಾಂತರಿಗಳಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಮುಂದಿನ ತಿಂಗಳು 15 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ನಾವು ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದರೆ ಅಚ್ಚರಿ ಪಡಬೇಕಿಲ್ಲ. ಆದರೆ, ಕನಿಷ್ಠ 12 ಕ್ಷೇತ್ರಗಳಂತೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಜನಾದೇಶ ಪಡೆದುಕೊಂಡು ಮುಖ್ಯಮಂತ್ರಿಯಾಗಿಲ್ಲ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿರುವ ಅವರು, ನಮ್ಮ ಶಾಸಕರನ್ನು ದುಡ್ಡು ಕೊಟ್ಟು ಖರೀದಿ ಮಾಡಿದ್ದಾರೆ. ಜನರು ಈ ಪಕ್ಷಾಂತರಿಗಳನ್ನು ಎಂದಿಗೂ ಸಹಿಸುವುದಿಲ್ಲ. ಇವರೆಲ್ಲರಿಗೂ ಪಾಠ ಕಲಿಸಲು ಮತದಾರರು ಕಾದು ಕುಳಿತಿದ್ದಾರೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೇಂದ್ರದಲ್ಲಿ ಎರಡನೆ ಅವಧಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ, ದೇಶದ ಬಡತನ, ನಿರುದ್ಯೋಗ, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಮೂಲಭೂತ ಸೌಕರ್ಯ ಹಾಗೂ ಸಾಮರಸ್ಯಕ್ಕಾಗಿ ಯಾವುದೇ ಮಹತ್ವದ ಕಾರ್ಯಕ್ರಮಗಳನ್ನು ನೀಡಿಲ್ಲ ಎಂದು ದೂರಿದರು.

ಕೇಂದ್ರ ಸರಕಾರದ ಅವೈಜ್ಞಾನಿಕವಾದ ನೀತಿಗಳಿಂದ ದೇಶದ ಜಿಡಿಪಿ ಶೇ.6ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ. ಡಾಲರ್ ಎದುರು ರೂಪಾಯಿ ವೌಲ್ಯ 72ರ ಗಡಿ ದಾಟಿದೆ. ಆಟೋಮೊಬೈಲ್ ಕ್ಷೇತ್ರ, ಬೈಸಿಕಲ್ ಕೈಗಾರಿಕೆಗಳು, ಜವಳಿ ಉದ್ದಿಮೆ, ಗಾರ್ಮೆಂಟ್ ಕೈಗಾರಿಕೆಗಳು, ಸಿಮೆಂಟ್ ಇಂಡಸ್ಟ್ರಿ, ಕಬ್ಬಿಣದ ಕೈಗಾರಿಕೆಗಳು, ಸಣ್ಣ ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗಗಳು ಕಡಿತಗೊಂಡು ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬೀದಿಪಾಲಾಗಿದ್ದಾರೆ ಎಂದು ಅವರು ಆರೋಪಿಸಿದರು.

ವಿದೇಶಿ ಕಂಪೆನಿಗಳು ಈಸ್ಟ್ ಇಂಡಿಯಾ ಕಂಪೆನಿಯ ರೀತಿಯಲ್ಲಿ ಭಾರತವನ್ನು ಆಕ್ರಮಿಸಲು ಅವಕಾಶ ನೀಡುತ್ತಿರುವ ಕೇಂದ್ರ ಸರಕಾರದ ಕ್ರಮ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದರು.

ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಧ್ರುವ ನಾರಾಯಣ್, ಮಾಜಿ ಸಚಿವರಾದ ರಾಮಲಿಂಗರೆಡ್ಡಿ, ಉಮಾಶ್ರೀ, ರಾಣಿ ಸತೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೋದಿ ನಾಟಕ ನಡೆಯುವುದಿಲ್ಲ

ನರೇಂದ್ರ ಮೋದಿಯ ನಾಟಕ ಬಹಳ ದಿನ ನಡೆಯುವುದಿಲ್ಲ. ಒಂದೆರೆಡು ಬಾರಿ ಮಾತ್ರ ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ಸೆಳೆಯಬಹುದಷ್ಟೇ. ಇತ್ತೀಚೆಗೆ ನಡೆದ ಮಹಾರಾಷ್ಟ್ರ ಚುನಾವಣೆ ವೇಳೆ ಸಂವಿಧಾನದ 370ನೇ ವಿಧಿ ರದ್ದು, ಪುಲ್ವಾಮ ದಾಳಿ ಕುರಿತು ಪದೇ ಪದೇ ಮೋದಿ ಪ್ರಸ್ತಾಪ ಮಾಡಿದ್ದರು. ಆದರೆ, ಅಲ್ಲಿನ ಮತದಾರರು ಈ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂಬುದಕ್ಕೆ ಚುನಾವಣೆಯ ಫಲಿತಾಂಶವೇ ಸಾಕ್ಷಿ.

-ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News