ಯೂಟ್ಯೂಬ್ ಕ್ರೈಂ ಸ್ಟೋರಿಗಳಿಂದ ಪ್ರಭಾವಿತನಾಗಿ ಹಣ ಲಪಟಾಯಿಸಲು ಯತ್ನ: ಆರೋಪಿ ಬಂಧನ

Update: 2019-11-11 15:55 GMT

ಬೆಂಗಳೂರು, ನ.11: ಯೂಟ್ಯೂಬ್‌ನಲ್ಲಿ ಸಿಗುವ ಕ್ರೈಂ ಸ್ಟೋರಿಗಳನ್ನು ನೋಡಿ, ಪ್ರಭಾವಿತರಾದ ಎಂಸಿಎ ಪದವೀಧರನೊಬ್ಬ ಹಣ ಲಪಟಾಯಿಸಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವನಾದ ದೇವೇಂದ್ರ ಕುಮಾರ್ ಎಂಬುವವ ನಗರದಲ್ಲಿದ್ದುಕೊಂಡು ಯೂಟ್ಯೂಬ್‌ನಲ್ಲಿನ ಕ್ರೈಂ ಸ್ಟೋರಿಗಳನ್ನು ನೋಡಿ ಪ್ರಭಾವಕ್ಕೆ ಒಳಗಾಗಿದ್ದಾನೆ. ಅದೇ ಮಾದರಿಯಲ್ಲಿ ಒಬ್ಬ ವೈದ್ಯ ಹಾಗೂ ನಿವೃತ್ತ ಉದ್ಯೋಗಿಯಿಂದ ಹಣ ಲಪಟಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ನಿವೃತ್ತ ಉದ್ಯೋಗಿ ಈಶ್ವರ್ ಭಟ್(85) ಹಾಗೂ ವೈದ್ಯರಾಗಿರುವ ಮಂಜುನಾಥ್ ರೆಡ್ಡಿ ಈತನ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, ದೇವೇಂದ್ರ ಕುಮಾರ್‌ಗಾಗಿ ಶೋಧ ನಡೆಸಿದ್ದರು. ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿ ಯೂಟ್ಯೂಬ್‌ನಲ್ಲಿ ಸಿಕ್ಕಿದಂತೆ ನಿವೃತ್ತ ಉದ್ಯೋಗಿಗಳ ಮನೆ ಮುಂದೆ, ಶ್ರೀಮಂತರು, ಉನ್ನತ ಹುದ್ದೆಯಲ್ಲಿರುವವರ ಮನೆ ಮುಂದೆ ಪತ್ರ ಎಸೆದು ಈಮೇಲ್ ವಿಳಾಸ ನಮೂದಿಸಿ ಹಣ ಲಪಟಾಯಿಸಲು ಯತ್ನಿಸುತ್ತಾರೆ. ಇದೇ ಮಾದರಿಯಲ್ಲಿ ದೇವೇಂದ್ರ ಮಾಡಲು ಮುಂದಾಗಿದ್ದನು. ಅದರಂತೆ ಈಶ್ವರ್ ಭಟ್ ಹಾಗೂ ಮಂಜುನಾಥ್ ಮನೆಯ ಮುಂದೆ ತೂಗಿಸಿದ್ದ ಹಾಲಿನ ಪ್ಯಾಕೆಟ್ ಬ್ಯಾಗ್‌ನಲ್ಲಿ ಪತ್ರ ಹಾಕಿ, ಬೆದರಿಸಿದ್ದನು.

1 ಲಕ್ಷ ರೂ. ಹಣ ನೀಡಬೇಕು. ಮಧ್ಯಾಹ್ನ 12.30ರೊಳಗಾಗಿ ನೀಡದಿದ್ದರೆ ನಿಮ್ಮನ್ನು ಕೊಲೆ ಮಾಡುವುದಾಗಿ ತಾನು ಸಂಚು ರೂಪಿಸಿದಂತೆ ಪತ್ರದಲ್ಲಿ ಬರೆದಿದ್ದ. ಜತೆಗೆ ತನ್ನ ಈ-ಮೇಲ್ ಐಡಿಯನ್ನು ನಮೂದಿಸಿದ್ದ. ಬೆಳಗ್ಗೆ ಈ ಪತ್ರವನ್ನು ನೋಡಿದ ಇಬ್ಬರೂ ಆತಂಕಗೊಂಡು ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಿನಿಮೀಯ ಶೈಲಿಯಲ್ಲಿ ಬಂಧನ: ಆತಂಕಗೊಂಡಿದ್ದ ದೂರುದಾರರು, ಕೂಡಲೇ ಇಲ್ಲಿನ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನು ಪರಿಶೀಲಿಸಿ, ಕಾರ್ಯಪ್ರವೃತ್ತರಾದ ಪೊಲೀಸರು ಆತ ನಮೂದಿಸಿದ್ದ ಈ ಮೇಲ್ ಸಂದೇಶ ಹಾಗೂ ಬ್ಯಾಂಕ್ ಖಾತೆಯನ್ನು ಆಧರಿಸಿ, ಅವರ ಸಂಪೂರ್ಣ ವಿಳಾಸ ಪಡೆದಿದ್ದರು. ಅನಂತರ ದೇವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News