ಉನ್ನತ ಶಿಕ್ಷಣದಲ್ಲಿ ಭಾರತ ಹಿಂದುಳಿದಿದೆ: ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್

Update: 2019-11-11 18:04 GMT

ಬೆಂಗಳೂರು, ನ.11: ಅಂತರ್‌ರಾಷ್ಟ್ರೀಯ ಉನ್ನತ ಶಿಕ್ಷಣ ಗುಣಮಟ್ಟಕ್ಕೆ ಹೋಲಿಸಿದರೆ ಭಾರತ ಸಾಕಷ್ಟು ಹಿಂದುಳಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಮೈಸೂರು ವಿವಿಯ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 10ನೇ ಅಂತರ್‌ರಾಷ್ಟ್ರೀಯ ಬಹು ಶಿಸ್ತೀಯ ಸಮಾವೇಶದಲ್ಲಿ ಉನ್ನತ ಶಿಕ್ಷಣದ ಸಮಸ್ಯೆ ಮತ್ತು ಸವಾಲುಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಮಾರು ಒಂದು ಸಾವಿರದ ಸನ್ನಿಹದಷ್ಟು ವಿಶ್ವವಿದ್ಯಾಲಯಗಳಿದ್ದು, ಸಾವಿರಾರು ಪದವಿ ಕಾಲೇಜುಗಳಿವೆ. ಆದರೂ, ವಿಶ್ವ ಮಟ್ಟದಲ್ಲಿ ಸಾಕಷ್ಟು ಪೈಪೋಟಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿನ ವಿವಿಗಳು ಮತ್ತಷ್ಟು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದೆ ಎಂದರು.

ದೇಶದ ಅಭಿವೃದ್ಧಿಗೆ ಉನ್ನತ ಸಂಶೋಧನೆಗಳ ಕೊಡುಗೆ ಅತ್ಯವಶ್ಯಕವಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಂಶೋಧನೆ ಬಗ್ಗೆ ಆಸಕ್ತಿಯುಳ್ಳ ವಿದ್ಯಾರ್ಥಿಗಳಿದ್ದಾರೆ, ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಂತಹ ಸಂಪನ್ಮೂಲ ವ್ಯಕ್ತಿಗಳ ಕೊರತೆಯಿದೆ ಎಂದು ಅವರು ಹೇಳಿದರು.

ಎಂಜಿನಿಯರಿಂಗ್ ಹಾಗೂ ವೆುಡಿಕಲ್ ಸೀಟ್‌ಗಳು ಪ್ರಾಮಾಣಿಕವಾಗಿ ಶೇ.95 ರಷ್ಟು ಮೆರಿಟ್ ಆಧಾರದ ಮೇಲೆ ಹಂಚಿಕೆಯಾದರೂ, ಉಳಿದ ಶೇ.5 ರಷ್ಟು ಪ್ರತಿಭಾವಂತರಿಗೆ ಸಿಗುತ್ತಿಲ್ಲ. ಇದು ಉನ್ನತ ಶಿಕ್ಷಣದಲ್ಲಿ ಮಧ್ಯವರ್ತಿಗಳ ಪಾಲಾಗುತ್ತಿದ್ದು, ಇಂತಹ ವ್ಯವಸ್ಥೆಯನ್ನು ಸಂಪೂರ್ಣ ಸರಿಪಡಿಸಬೇಕಿದೆ ಎಂದು ಅವರು ನುಡಿದರು.

ಬೆಂಗಳೂರು ವಿವಿಯ ಕುಲಪತಿ ಕೆ.ಆರ್.ವೇಣುಗೋಪಾಲ್ ಮಾತನಾಡಿ, ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮಗೊಳಿಸಬೇಕಿದೆ. ವಿಶ್ವವಿದ್ಯಾಲಯಗಳಿಗೆ ಪರಿಮಿತಿ ಇರಬಾರದು. ಸ್ವತಂತ್ರವಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಬೇಕು. ಎಲ್ಲಾ ಕೋರ್ಸ್‌ಗಳ ಮಧ್ಯೆ ಸಮನ್ವಯತೆ ಸಾಧಿಸಬೇಕು ಎಂದರು. ಅಂತರ್ ಶಿಸ್ತೀಯ(ಇಂಟರ್‌ಡಿಸಿಪ್ಲಿನರಿ) ಮತ್ತು ಬಹು ಶಿಸ್ತೀಯ (ಮಲ್ಟಿ ಡಿಸಿಪ್ಲಿನರಿ) ಸಂಶೋಧನೆಗಳು ಇಂದಿನ ಕಾಲಘಟ್ಟಕ್ಕೆ ಅತ್ಯವಶ್ಯಕವಾಗಿವೆ. ಹೀಗಾಗಿ, ಈ ನಿಟ್ಟಿನಲ್ಲಿ ವಿವಿಯ ಕೋರ್ಸ್‌ಗಳು ಮತ್ತು ಪಠ್ಯಗಳು ಸಿದ್ದಪಡಿಸಬೇಕಿದೆ ಎಂದು ಹೇಳಿದರು.

ಬೆಂಗಳೂರು ವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಲಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣ ಹೆಚ್ಚು ಕಾರ್ಪೋರೇಟ್‌ಮಯವಾಗಿದ್ದು, ಲಾಭದಾಯಕ ಉದ್ದಿಮೆಯಾಗಿ ಬೆಳೆಯುತ್ತಿದೆ. ಪ್ರಾದೇಶಿಕತೆಗೆ ಮತ್ತು ಆರ್ಥಿಕತೆಗೆ ಅನುಗುಣವಾಗಿ ಶಿಕ್ಷಣವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಸ್ಟ್ರೇಲಿಯಾದ ವಿಕ್ಟೋರಿಯಾ ಸ್ಟೇಟ್‌ನ ಆಯುಕ್ತೆ ಮಿಶೆಲ್ ವೇಡ್ ಮಾತನಾಡಿ, ಆಸ್ಟ್ರೇಲಿಯಾದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿಕ್ಟೋರಿಯಾ ರಾಜ್ಯದಲ್ಲಿ ಸದ್ಯ 50ಸಾವಿರಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದು, ಈ ಸಂಖ್ಯೆಯನ್ನು ಮುಂದಿನ ಎರಡು ವರ್ಷಗಳಲ್ಲಿ ದುಪ್ಪಟ್ಟು ಮಾಡುವ ಕಡೆಗೆ ಚಿಂತಿಸಲಾಗಿದೆ ಎಂದು ಹೇಳಿದರು.

ಅಮೇರಿಕಾದ ಯೂನಿವರ್ಸಲ್ ಡಿಜಿಟಲ್ ಯೂನಿವರ್ಸಿಟಿ ಕುಲಪತಿ ಡಾ.ಹರಿಕೃಷ್ಣನ್ ಮಾರನ್ ಮಾತನಾಡಿ, ವಿವಿಗಳು ವಿದ್ಯಾರ್ಥಿಗಳಿಗೆ ಪಠ್ಯವನ್ನು ಬೋಧಿಸುವುದು ಕಡಿಮೆ ಮಾಡಬೇಕಿದೆ. ಮಾನವನ ಮತ್ತು ಪರಿಸರದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮಾರ್ಗಗಳನ್ನು ತಿಳಿಸಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಮೂಲಕ ಹೊಸ ಸಂಶೋಧನೆಗಳು ನಡೆಯಲಿವೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಂಗಾಪುರದ ಜೇಮ್ಸ್ ಕುಕ್ ವಿವಿ ಕುಲಪತಿ ಡಾ.ದೇಸ್ತಿ ಕನ್ನಯ್ಯ, ಬೆಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ರಾಮಪ್ಪ, ಸಮ್ಮೇಳನದ ನಿರ್ದೇಶಕ ಡಾ.ಕೆ.ಶಿವಚಿತ್ತಪ್ಪ, ಕಲಾ ನಿಕಾಯದ ಮಾಜಿ ಡೀನ್ ಪ್ರೊ.ಪಿ.ಎಸ್.ಜಯರಾಮು ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News