ಆಪರೇಷನ್, ಸರ್ಜರಿಯಲ್ಲಿ ಬಿಎಸ್‌ವೈ ಅವರೇ ಸ್ಪೆಷಲಿಸ್ಟ್: ಸಿದ್ದರಾಮಯ್ಯ ವ್ಯಂಗ್ಯ

Update: 2019-11-12 12:19 GMT

ಬೆಂಗಳೂರು, ನ. 12: ‘ಈ ಆಪರೇಷನ್, ಸರ್ಜರಿ(ಶಸ್ತ್ರ ಚಿಕಿತ್ಸೆ) ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪಅವರೇ ಸ್ಪೆಷಲಿಸ್ಟ್(ಪರಿಣಿತ). ನಾನು ಡಾಕ್ಟರೂ (ವೈದ್ಯ) ಅಲ್ಲ, ನನಗೆ ಯಾವ ರೋಗಿಗಳೂ ಗೊತ್ತಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ನಾವಾಗಿಯೇ ಹಣ, ಅಧಿಕಾರದ ಆಮಿಷ ಒಡ್ಡಿ ಬೇರೆ ಪಕ್ಷದವರನ್ನು ನಮ್ಮ ಪಕ್ಷಕ್ಕೆ ಕರೆತಂದರೆ ಅದು ಆಪರೇಷನ್ ಆಗುತ್ತದೆ. ಆದರೆ, ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಅವರಾಗಿಯೇ ಬಂದರೆ ಅದು ಆಪರೇಷನ್ ಹೇಗಾಗುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

ಹಿಂಬಾಗಿಲ ರಾಜಕಾರಣಕ್ಕೆ ಬಿಜೆಪಿ ಹೆಸರುವಾಸಿ: ‘ಬಿಜೆಪಿಯವರ ಬಳಿ ಹಣವಿದೆ, ಅಧಿಕಾರ ಹಿಡಿಯಲು ಆಪರೇಷನ್ ಕಮಲವನ್ನೂ ಮಾಡ್ತಾರೆ, ಅನೈತಿಕ ರಾಜಕಾರಣವನ್ನೂ ಮಾಡ್ತಾರೆ. ಮೌಲ್ಯಾಧಾರಿತ ರಾಜಕಾರಣ ಅಂದ್ರೆ ಏನು ಅಂತಲೇ ಅವರಿಗೆ ಗೊತ್ತಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಹಿಂಬಾಗಿಲ ರಾಜಕಾರಣಕ್ಕೆ ಬಿಜೆಪಿಯವರು ಹೆಸರುವಾಸಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಟ್ಟು ಹೋಗುವವರನ್ನು ತಡೆಯಲಿ: ‘ಉಪಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಇನ್ನಷ್ಟು ಜನ ನಮ್ಮ ಪಕ್ಷಕ್ಕೆ ಬರುತ್ತಾರೆಂದು ಸಚಿವ ಸಿ.ಟಿ.ರವಿ ಹೇಳಿದ್ದಾರಂತೆ. ಮೊದಲು ಬಿಜೆಪಿ ಬಿಟ್ಟು ಹೋಗುತ್ತಿರುವವರನ್ನು ತಡೆಯಲಿ, ಆಮೇಲೆ ಬೇರೆ ಮಾತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಹೇಳಿಕೆಗಳನ್ನು ಕೇಳಿ ಕೇಳಿ ಸಾಕಾಗಿದೆ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಯಾರ ಸಿಎಂ ಪಟ್ಟ ತಪ್ಪಿಸಿಲ್ಲ..

‘ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಹೈಕಮಾಂಡ್ ಸೂಚಿಸಿತ್ತು. ಹೈಕಮಾಂಡ್ ಆದೇಶವನ್ನು ನಾನು ಪಾಲಿಸಿದೆ. ಇದರಲ್ಲಿ ನನ್ನ ಪಾತ್ರ ಇಷ್ಟೆ. ಹೈಕಮಾಂಡ್ ಜೊತೆ ಚರ್ಚಿಸಿದ್ದು, ಸರಕಾರ ರಚಿಸಿದ್ದು ದೇವೇಗೌಡರು. ನಾನು ಯಾರ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಿಲ್ಲ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News