ಕೆಎಸ್ಸಾರ್ಟಿಸಿಯಿಂದ ಮಹಿಳಾ ಸಿಬ್ಬಂದಿಗೆ ಉಚಿತ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮ

Update: 2019-11-12 08:30 GMT

ಬೆಂಗಳೂರು, ನ,12: ಕರ್ನಾಟಕ ರಾಜ್ಯ ಸಾರಿಗೆ ನಿಗಮವು ತನ್ನ ಮಹಿಳಾ ಸಿಬ್ಬಂದಿಗೆ ಎರಡು ದಿನಗಳ ಉಚಿತ ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಸಹಯೋಗದೊಂದಿಗೆ ಪ್ರಥಮ ಬಾರಿಗೆ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಿಗಮದ ಕೇಂದ್ರೀಯ ವಿಭಾಗದ 2ನೇ ಘಟಕದ ಯೋಗ ಕೊಠಡಿಯಲ್ಲಿಂದು ಚಾಲನೆ ನೀಡಲಾಯಿತು.

 ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶ ಶಿವಯೋಗಿ ಸಿ. ಕಳಸದ, ಉಚಿತ ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮದ ಮೊದಲ ಶಿಬಿರವನ್ನು ಇಂದು ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ ಪ್ರಾರಂಭಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಿಗಮದ ಎಲ್ಲ ವಿಭಾಗಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದರು.

ಕೆಎಸ್ಸಾರ್ಟಿಸಿಯಲ್ಲಿ ಒಟ್ಟು 3,200 ಮಹಿಳಾ ಸಿಬ್ಬಂದಿಯಿದ್ದು, ನಾಲ್ಕು ನಿಗಮಗಳಿಂದ ಒಟ್ಟು 8,500 ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ಕಷ್ಟಕರವಾದ ಕೆಲಸವನ್ನು ನಿರ್ವಹಿಸುತ್ತಿದ್ದು, ಮನೆ ಮತ್ತು ಕಚೇರಿ ಎರಡೂ ಕಡೆ ಕರ್ತವ್ಯ್ರ ನಿರ್ವಹಿಸುತ್ತಾ ಆರೋಗ್ಯದ ಗಮನವಹಿಸುವುದು ಹಾಗೂ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಸಂಸ್ಥೆಯ ಆರೋಗ್ಯವು ಸಿಬ್ಬಂದಿಯ ಆರೋಗ್ಯದ ಮೇಲೆ ಅವಲಂಬಿಸಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ನಿರಂತರ ಕ್ರಮ ವಹಿಸಿದೆ‌ ಎಂದು ತಿಳಿಸಿದರು.

 ನಿಗಮದ ನಿರ್ದೇಶಕರು (ಸಿಬ್ಬಂದಿ ಮತ್ತು ಪರಿಸರ) ಕವಿತಾ ಎಸ್. ಮನ್ನಿಕೇರಿ, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಡಾ.ಮಹಾಂತೇಶ್, ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಡಾ.ಸತ್ಯನಾರಾಯಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News