ಬೆಂಗಳೂರಿನಲ್ಲಿ ನ.18ರಿಂದ ಮೂರು ದಿನಗಳ ತಂತ್ರಜ್ಞಾನ ಶೃಂಗಸಭೆ: ಡಿಸಿಎಂ ಅಶ್ವಥ್ ನಾರಾಯಣ

Update: 2019-11-12 14:09 GMT

ಬೆಂಗಳೂರು, ನ. 12: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಶಯದಂತೆ ನವೀನ ಆವಿಷ್ಕಾರಗಳಿಗೆ ಕರ್ನಾಟಕ ರಾಜ್ಯ ಹೆಚ್ಚಿನ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನ.18ರಿಂದ ಮೂರು ದಿನಗಳ ತಂತ್ರಜ್ಞಾನ ಶೃಂಗಸಭೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಮಂಗಳವಾರ ಮಾತನಾಡಿದ ಅವರು, ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಐಟಿ, ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಪ್ರಮುಖ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ. ಉದ್ಯಮದ ಹಿರಿಯ ನಾಯಕರನ್ನೊಳಗೊಂಡ ವಿಷನ್ ಗ್ರೂಪ್ ನಮ್ಮೊಂದಿಗಿದೆ. ಹಿಂದೆಂದಿಗಿಂತಲೂ ಈ ಶೃಂಗಸಭೆ ವಿಭಿನ್ನ-ದೊಡ್ಡಮಟ್ಟದಲ್ಲಿ ನಡೆಯಲಿದ್ದು, ಐಟಿ-ಬಿಟಿ ಸೇರಿ ನವೀನ ತಂತ್ರಜ್ಞಾನ, ಅನ್ವೇಷಣೆಗಳ ಕುರಿತ ಚರ್ಚೆಗೆ ಸೂಕ್ತ ವೇದಿಕೆಯಾಗಲಿದೆ. ಈ ಬಾರಿ 20ರಾಷ್ಟ್ರಗಳ ಅತಿದೊಡ್ಡ ಅಂತರ್‌ರಾಷ್ಟ್ರೀಯ ಸಮೂಹ ಸಭೆಯಲ್ಲಿ ಭಾಗಿಯಾಗಲಿದೆ. ಸಭೆಯಲ್ಲಿ ಹಲವು ಅಂತರ್‌ರಾಷ್ಟ್ರೀಯ ಒಪ್ಪಂದಗಳು ಏರ್ಪಡುವ ನಿರೀಕ್ಷೆಯೂ ಇದೆ ಎಂದು ಅವರು ತಿಳಿಸಿದರು.

ರೊಬೋಟಿಕ್ ಪ್ರೀಮಿಯರ್‌ ಲೀಗ್: ಆರ್2-ರೋಬೊಟಿಕ್ ಪ್ರೀಮಿಯರ್ ಲೀಗ್ ಈ ವರ್ಷದ ಹೊಸ ಸೇರ್ಪಡೆ. ದೇಶದ ಅತಿದೊಡ್ಡ ರೊಬಾಟಿಕ್ಸ್ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಭಾಗಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಇತರ ವಿದ್ಯಾರ್ಥಿಗಳ ಜತೆ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದು. ಶಿಕ್ಷಣ ತಜ್ಞರು ಹಾಗೂ ಉದ್ದಿಮೆಯ ಪರಿಣಿತರಿಂದ ಮಾರ್ಗದರ್ಶನ ಪಡೆಯಲು ಸಭೆ ಅಪೂರ್ವ ಅವಕಾಶ ಒದಗಿಸುವುದು ಎಂದು ತಿಳಿಸಿದರು.

ಹೊಸ ಪ್ರಶಸ್ತಿ: ಎಸ್‌ಟಿಪಿಐ ಐಟಿ ಎಕ್ಸ್‌ಪೋರ್ಟ್ ಅವಾರ್ಡ್ ಹಾಗೂ ಸ್ಮಾರ್ಟ್‌ಬಯೋ ಅವಾರ್ಡ್ ಅಲ್ಲದೇ, ಉದ್ದಿಮೆ ಪ್ರಶಸ್ತಿ ವಿಭಾಗಕ್ಕೆ ಈ ಬಾರಿ ಹೊಸದಾಗಿ ‘ಬೆಂಗಳೂರು ಇಂಪ್ಯಾಕ್ಟ್ ಅವಾರ್ಡ್’ ಸೇರಲಿದೆ. ಉದ್ಯಮದಲ್ಲಿ ಯಶಸ್ಸು ಕಂಡಿರುವ ಸಾಧಕರು ಜಾಗತಿಕ ನಕ್ಷೆಯಲ್ಲಿ ಬೆಂಗಳೂರಿಗೆ ವಿಶಿಷ್ಟ ಸ್ಥಾನ ತಂದುಕೊಟ್ಟಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ, ಉತ್ತೇಜಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ‘ಬೆಂಗಳೂರು ಇಂಪ್ಯಾಕ್ಟ್ ಅವಾರ್ಡ್’ ನೀಡುತ್ತಿದ್ದೇವೆ ಎಂದು ಅವರು ವಿವರಿಸಿದರು.

ಇಂಡಿಯಾ-ಬಯೋ: ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಹೆಚ್ಚಿಸುವಲ್ಲಿ ಜೈವಿಕ ತಂತ್ರಜ್ಞಾನದ ಪಾತ್ರ ದೊಡ್ಡದು. ಬೆಂಗಳೂರು ಟೆಕ್ ಶೃಂಗಸಭೆ ಇಂಡಿಯಾ ಬಯೋ-ಸ್ಮಾರ್ಟ್ ಬಯೋ ಪಿಚ್‌ಟೂನಿಂಗ್ ಸೆಷನ್‌ಗೆ ಸಾಕ್ಷಿ ಆಗಲಿದೆ. ಆರಂಭಿಕ ಹಂತದ ಜೈವಿಕ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳಿಗೆ ಕ್ಷೇತ್ರದ ಹಿರಿಯರ ಮಾರ್ಗ ದರ್ಶನ ದೊರೆಯಲಿದೆ. ಬಯೋ ಸ್ಟಾರ್ಟ್‌ಅಪ್‌ಗಳಿಗಾಗಿ ಆಯೋಜಿಸಿರುವ ಮೊದಲ ಸಭೆ ಇದಾಗಿದ್ದು, 20ಕ್ಕೂ ಹೆಚ್ಚು ಬಯೋಟೆಕ್ ಸಂಸ್ಥೆಗಳು ಪಾಲ್ಗೊಳ್ಳುವುದಾಗಿ ಖಚಿತಪಡಿಸಿವೆ ಎಂದರು. ಸ್ಮಾರ್ಟ್ ಬಯೋ ಟೆಕ್ನಾಲಜಿ ಅದರಲ್ಲೂ ವಿಶೇಷವಾಗಿ ಕೈಗೆಟಕುವ ದರದ ಔಷಧ ಅಭಿವೃದ್ಧಿ, ಸಿಂಥಟೆಕ್ ಬಯಾಲಿಜಿ, ಬಯೋ ಇಂಜಿನಿಯರಿಂಗ್ ಮುಂತಾದ ಉದಯೋನ್ಮುಖ ವಲಯದ ಕುರಿತು ಜೈವಿಕ ತಂತ್ರಜ್ಞಾನ ಉದ್ಯಮದ ದಿಗ್ಗಜರು, ಜೈವಿಕ-ತಾಂತ್ರಿಕ ತಜ್ಞರು, ವಿಜ್ಞಾನಿಗಳು ಚರ್ಚಿಸಲು ‘ಇಂಡಿಯಾ ಬಯೊ’ ಉತ್ತಮ ವೇದಿಕೆ ಆಗಲಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಹಿರಿಮೆ: ಅನ್ವೇಷಣೆ, ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ರಾಜ್ಯ ಅಗ್ರಸ್ಥಾನ ಪಡೆದಿದೆ. ಬೆಂಗಳೂರು ವಿಶ್ವದ 4ನೆ ಅತಿದೊಡ್ಡ ತಾಂತ್ರಿಕ ಕ್ಲಸ್ಟರ್. ಜಾಗತಿಕ ಮಟ್ಟದ ತಾಂತ್ರಿಕ ಕೇಂದ್ರ ಎಂಬ ಹೆಗ್ಗೆಳಿಕೆಯೂ ನಗರಕ್ಕೆ ಇದೆ.

ನ್ಯೂಯಾರ್ಕ್, ಟೊಕಿಯೋ, ಲಂಡನ್, ಬೀಜಿಂಗ್, ಟೆಲ್ ಅವಿವ್ ಮುಂತಾದ ನಗರಗಳ ಸಾಲಿನಲ್ಲಿ ಬೆಂಗಳೂರಿಗೂ ಸ್ಥಾನ ಇದೆ ಎಂಬುದು ಹೆಮ್ಮೆಯ ಸಂಗತಿ. ನುರಿತ ಕಾರ್ಯಪಡೆ ಹಾಗೂ ಸುಧಾರಿತ ತಂತ್ರಜ್ಞಾನ ಪರಿಣಿತಿ, ನಾವೀನ್ಯತೆ ಮತ್ತು ಉದ್ಯಮಕ್ಕೆ ಪೂರಕ ವಾತಾವರಣದ ವಿಶಿಷ್ಟ ಸಂಯೋಜನೆ ಬೆಂಗಳೂರು ಎಂದರೆ ತಪ್ಪಾಗದು, ಎಂದರು.

ಕನ್ನಡಿಗರಿಗೆ ಆದ್ಯತೆ:

‘ಅಸಾಧಾರಣ ಬುದ್ಧಿವಂತಿಕೆ ಹೊಂದಿರುವ ಶಾಲಾ ಮಕ್ಕಳು ಹಾಗೂ ಅವರಿಗೆ ಮಾರ್ಗದರ್ಶ ಒದಗಿಸಬಲ್ಲವರು ಅಥವಾ ಸಂಸ್ಥೆಗಳನ್ನು ಒಂದುಗೂಡಿಸುವ ಕಾರ್ಯತಂತ್ರವನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ. ತಂತ್ರಜ್ಞಾನ ವಲಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದೇ ಈ ಯೋಜನೆಯ ಮೂಲ ಉದ್ದೇಶ’

-ಡಾ.ಅಶ್ವಥ್ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News