ಬಾಬರಿ ಮಸೀದಿ ಈಗ ಇದ್ದಿದ್ದರೆ ಅದರ ನೆಲಸಮಕ್ಕೆ ಸುಪ್ರೀಂಕೋರ್ಟ್ ಆದೇಶಿಸುತ್ತಿತ್ತೇ?

Update: 2019-11-12 15:17 GMT
ಫೋಟೊ: indiatoday

ಹೊಸದಿಲ್ಲಿ, ನ.12: ಅಯೋಧ್ಯೆಯಲ್ಲಿ ಬಾಬರಿ ಮಸೀದಿಯು ಧ್ವಂಸಗೊಂಡಿರದಿದ್ದರೆ ಈಗ ಅದನ್ನು ನೆಲಸಮಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸುತ್ತಿತ್ತೇ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎ.ಕೆ.ಗಂಗೂಲಿ ಅವರು ಪ್ರಶ್ನಿಸಿದ್ದಾರೆ.

 ‘Thewire.in’ ಸುದ್ದಿ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಅಯೋಧ್ಯೆ ಭೂ ವಿವಾದ ಪ್ರಕರಣದ ತೀರ್ಪಿನ ಕುರಿತು ಮಾತನಾಡಿದ ಅವರು,ತೀರ್ಪು ವಾಸ್ತವದಲ್ಲಿ ಮಸೀದಿ ಧ್ವಂಸ ಕೃತ್ಯಕ್ಕೆ ‘ಬಹುಮಾನ ’ವನ್ನು ನೀಡಿದೆ ಎಂದರು.

 1949ರಲ್ಲಿ ಬಾಬರಿ ಮಸೀದಿಯ ಒಳಗೆ ವಿಗ್ರಹಗಳನ್ನಿರಿಸಿದ್ದು ಮತ್ತು 1992ರಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕಾನೂನುಬಾಹಿರ ಕೃತ್ಯಗಳಾಗಿದ್ದವು ಎಂದು ಸರ್ವೋಚ್ಚ ನ್ಯಾಯಾಲಯವು ಶನಿವಾರದ ತನ್ನ ತೀರ್ಪಿನಲ್ಲಿ ಹೇಳಿದೆಯಾದರೂ ಅಂತಿಮವಾಗಿ ವಿವಾದಿತ ನಿವೇಶನವನ್ನು ಹಿಂದುಗಳಿಗೆ ಒಪ್ಪಿಸಿದೆ. 27 ವರ್ಷಗಳ ಹಿಂದೆ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿರದಿದ್ದರೆ ಮತ್ತು ಅದು ಶ್ರೀರಾಮನ ಜನ್ಮಸ್ಥಳ ಎಂದು ಹಕ್ಕು ಪ್ರತಿಪಾದಿಸಿ ಹಿಂದುಗಳು ನ್ಯಾಯಾಲಯದ ಮೆಟ್ಟಿಲನ್ನೇರಿದ್ದರೆ ಅದನ್ನು ನೆಲಸಮಗೊಳಿಸುವಂತೆ ನ್ಯಾಯಾಲಯವು ಆದೇಶಿಸುತ್ತಿತ್ತೇ? ಇಲ್ಲ,ಅದು ಅಂತಹ ಆದೇಶವನ್ನು ನೀಡುತ್ತಿರಲಿಲ್ಲ ಎಂದ ನ್ಯಾ.ಗಂಗೂಲಿ,ಹೀಗಾಗಿ ಪ್ರಕರಣದ ವಿಚಾರಣೆ ನಡೆಸಿದ ಪೀಠವು ಬಾಬರಿ ಮಸೀದಿ ಧ್ವಂಸವನ್ನು ಅಪರಾಧ ಕೃತ್ಯ ಎಂದು ಬಣ್ಣಿಸಿದ್ದರೂ,ನ್ಯಾಯಾಲಯವು ತನ್ನ ತೀರ್ಪಿನ ಮೂಲಕ ಧ್ವಂಸ ಕೃತ್ಯಕ್ಕೆ ‘ಬಹುಮಾನ’ವನ್ನು ನೀಡಿದೆ. ಈ ತೀರ್ಪು ಅತ್ಯಂತ ದುರದೃಷ್ಟಕರ ಪ್ರವೃತ್ತಿಯನ್ನು,ಒಟ್ಟಾರೆಯಾಗಿ ಜಾತ್ಯತೀತವಲ್ಲದ ಪ್ರವೃತ್ತಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

 ಈ ಪ್ರಕರಣದಲ್ಲಿ ತಾನು ನ್ಯಾಯಾಧೀಶನಾಗಿದ್ದರೆ ಮಸೀದಿಯ ಪುನರ್‌ನಿರ್ಮಾಣಕ್ಕೆ ಆದೇಶಿಸುತ್ತಿದ್ದೆ,ಇಲ್ಲದಿದ್ದರೆ ವಿವಾದಿತ ನಿವೇಶನದಲ್ಲಿ ಮಂದಿರ ಅಥವಾ ಮಸೀದಿ ನಿರ್ಮಾಣಕ್ಕೆ ಯಾವುದೇ ಪಕ್ಷಕ್ಕೆ ಅವಕಾಶ ನೀಡುತ್ತಿರಲಿಲ್ಲ. ಬದಲಿಗೆ ನಿವೇಶನವು ಆಸ್ಪತ್ರೆ,ಶಾಲೆ ಅಥವಾ ಕಾಲೇಜು ನಿರ್ಮಾಣದಂತಹ ಯಾವುದಾದರೂ ಜಾತ್ಯತೀತ ಉದ್ದೇಶದ ಕಾರ್ಯಕ್ಕೆ ಬಳಕೆಯಾಗುತ್ತಿತ್ತು ಎಂದು ಅವರು ತಿಳಿಸಿದರು.

ಬಾಬರಿ ಮಸೀದಿಯ ಕೆಳಗಿನ ರಚನೆಯು ವಾಸ್ತವದಲ್ಲಿ ಮಂದಿರವಾಗಿತ್ತು ಎನ್ನುವುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರವಿಲ್ಲ ಎನ್ನುವುದನ್ನು ಪರಿಗಣಿಸಿದರೆ ಈ ತೀರ್ಪು ದೋಷಯುಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು,ನ್ಯಾಯಾಧೀಶರು ಮಸೀದಿಯ ಪುನರ್‌ನಿರ್ಮಾಣಕ್ಕೆ ಅಥವಾ ತಟಸ್ಥ ಉದ್ದೇಶಕ್ಕಾಗಿ ಸರಕಾರಕ್ಕೆ ವಿವಾದಿತ ನಿವೇಶನದ ಹಸ್ತಾಂತರಕ್ಕೆ ಆದೇಶಿಸಬೇಕಾಗಿತ್ತು ಎಂದರು.

 ‘ ಅಲ್ಲಿ ಮಸೀದಿಯಿತ್ತು ಎನ್ನುವುದು ವಿವಾದಿತವಾಗಲಿಲ್ಲ,ಅದನ್ನು ಧ್ವಂಸಗೊಳಿಸಿದ್ದೂ ವಿವಾದಿತವಾಗಲಿಲ್ಲ. ಮಸೀದಿಯನ್ನು ಧ್ವಂಸಗೊಳಿಸುತ್ತಿದ್ದನ್ನು ನಾವೆಲ್ಲರೂ ನೋಡಿದ್ದೇವೆ ’ಎಂದ ನ್ಯಾ.ಗಂಗೂಲಿ,ಮಸೀದಿಯ ಅಡಿಯಲ್ಲಿ ಕಟ್ಟಡವೊಂದಿದೆ ಎಂದು ಈಗ ಸರ್ವೋಚ್ಚ ನ್ಯಾಯಾಲಯ ಹೇಳುತ್ತಿದೆ. ಆದರೆ ಅದು ಮಂದಿರವಾಗಿತ್ತು ಎನ್ನುವುದನ್ನು ತೋರಿಸುವ ಯಾವುದೇ ಅಂಶಗಳಿಲ್ಲ. ಮಂದಿರವನ್ನು ನೆಲಸಮಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ತೀರ್ಪು ಹೇಳುತ್ತದೆ. ಮಸೀದಿಯ ಕೆಳಗೆ ಯಾವುದೇ ರಚನೆಯಿದ್ದಿರಬಹುದು. ಅದು ಬೌದ್ಧ ಸ್ತೂಪ,ಜೈನರ ರಚನೆ ಅಥವ ಚರ್ಚ್ ಆಗಿದ್ದಿರಬಹುದು. ಆದರೆ ಅದು ಮಂದಿರವಾಗಿಲ್ಲದಿರಬಹುದು. ಹೀಗಾಗಿ ವಿವಾದಿತ ನಿವೇಶನವು ಹಿಂದುಗಳಿಗೆ ಅಥವಾ ರಾಮಲಲ್ಲಾಗೆ ಸೇರಿದ್ದು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಯಾವ ಆಧಾರದಲ್ಲಿ ನಿರ್ಧರಿಸಿದೆ ಎಂದು ಪ್ರಶ್ನಿಸಿದರು.

ತೀರ್ಪು ಸರ್ವಾನುಮತದ್ದಾಗಿದ್ದು,ಐವರು ನ್ಯಾಯಾಧೀಶರ ಪೀಠವು ಅದಕ್ಕೆ ಸಹಿ ಮಾಡಿದ್ದರೆ ಓರ್ವ ನ್ಯಾಯಾಧೀಶರು ‘ವಿವಾದಿತ ಕಟ್ಟಡವು ಹಿಂದುಗಳ ಶ್ರದ್ಧೆ ಮತ್ತು ನಂಬಿಕೆಗೆ ಅನುಗುಣವಾಗಿ ಶ್ರೀರಾಮನ ಜನ್ಮಸ್ಥಳವಾಗಿತ್ತೇ ’ಎಂಬ ಪ್ರಶ್ನೆಯ ಕುರಿತು ಪ್ರತ್ಯೇಕ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಅನಾಮಿಕರಾಗಿ ಉಳಿದಿರುವ ಈ ನ್ಯಾಯಾಧೀಶರು ‘ ಮಸೀದಿಯ ನಿರ್ಮಾಣಕ್ಕೆ ಮೊದಲು ಮತ್ತು ನಂತರವೂ,ಮಸೀದಿ ನಿರ್ಮಾಣಗೊಂಡಿರುವ ಸ್ಥಳವು ಶ್ರೀರಾಮನ ಜನ್ಮಸ್ಥಾನವಾಗಿತ್ತು ಎನ್ನುವುದು ಹಿಂದುಗಳ ಶ್ರದ್ಧೆ ಮತ್ತು ನಂಬಿಕೆಯಾಗಿತ್ತು ’ಎಂದು ತೀರ್ಪಿನೊಂದಿಗಿನ 116 ಪುಟಗಳ ಅನುಬಂಧದ ಅಂತ್ಯದಲ್ಲಿ ಬರೆದಿದ್ದಾರೆ.

ಈ ಅನುಬಂಧವು ಯಾವುದೇ ಅಂಕಿತವನ್ನು ಹೊಂದಿಲ್ಲದಿರುವುದೂ ತೀರ್ಪು ನೀಡುವ ವಾಡಿಕೆಯ ಪರಿಪಾಠಕ್ಕಿಂತ ಭಿನ್ನವಾಗಿದೆ ಮತ್ತು ಅತ್ಯಂತ ಅಚ್ಚರಿದಾಯಕ ಹಾಗೂ ಗಂಭೀರ ವಿಷಯವಾಗಿದೆ ಎಂದೂ ನ್ಯಾ.ಗಂಗೂಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News