ಶಿವಸೇನೆ ಜತೆ ಮೈತ್ರಿಗೆ ನಕಾರ: ಸೋನಿಯಾ ಪಟ್ಟು ಸಡಿಲಿಸಿದ್ದೇಕೆ?

Update: 2019-11-13 03:36 GMT

ಹೊಸದಿಲ್ಲಿ, ನ.13: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ವಿಫಲವಾದರೆ ಅದು ರಾಜ್ಯದಲ್ಲಿ ಪಕ್ಷದ ಅವಸಾನಕ್ಕೆ ಕಾರಣವಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರವಾನಿಸಿದ್ದಾರೆ. ಇದರಿಂದಾಗಿ ಶಿವಸೇನೆ ಜತೆ ಮೈತ್ರಿಗೆ ಖಡಾಖಂಡಿತವಾಗಿ ನಿರಾಕರಿಸಿದ್ದ ಸೋನಿಯಾ ತಮ್ಮ ನಿಲುವು ಸಡಿಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮ್ಯಾರಥಾನ್ ಚರ್ಚೆ ವೇಳೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ತಮ್ಮ ವಾದ ಮಂಡಿಸಿದರು ಎಂದು ತಿಳಿದುಬಂದಿದೆ.

ಕೇಸರಿ ಮೈತ್ರಿಕೂಟ ಕುಸಿದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಲಭಿಸಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಕ್ಷದ ಹಿರಿಯ ಮುಖಂಡರಾದ ಅಶೋಕ್ ಚವ್ಹಾಣ್, ಪೃಥ್ವಿರಾಜ್ ಚವ್ಹಾಣ್, ಬಾಳಾ ಸಾಹೇಬ್ ಥೋರಟ್, ಮಾಣಿಕ್‌ ರಾವ್ ಠಾಕ್ರೆ ಹಾಗೂ ರಜನಿ ಪಾಟೀಲ್ ಪ್ರತಿಪಾದಿಸಿದರು ಎನ್ನಲಾಗಿದೆ.

ಶಾಸಕರು ಕೂಡಾ ಸರ್ಕಾರದ ಭಾಗವಾಗಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವುದನ್ನು ಕೂಡಾ ಪಕ್ಷದ ಹೈಕಮಾಂಡ್‌ಗೆ ಮನವರಿಕೆ ಮಾಡಿದರು. ಎಲ್ಲ ಶಾಸಕರು ತಮ್ಮ ಸ್ವಂತ ಬಲದಿಂದ ಗೆದ್ದಿದ್ದಾರೆ ಹಾಗೂ ಸಿಟ್ಟಾಗಿದ್ದಾರೆ. ಪಕ್ಷವನ್ನು ಒಡೆಯುವ ಬಿಜೆಪಿ ಸಂಚು ವಿಫಲಗೊಳಿಸುವ ಸಲುವಾಗಿ ಅವರನ್ನು ಜೈಪುರಕ್ಕೆ ಕರೆದೊಯ್ಯಲಾಗಿದೆ ಎಂಬ ಅಂಶವನ್ನು ಕೂಡಾ ವಿವರಿಸಿದರು.

ಆದರೆ ಈ ವಾದಕ್ಕೆ ಎ.ಕೆ.ಆ್ಯಂಟನಿ, ಮುಕುಲ್ ವಾಸ್ನಿಕ್, ಮಾಜಿ ಗೃಹಸಚಿವ ಶಿವರಾಜ್ ಪಾಟೀಲ್ ಸೇರಿದಂತೆ ಇತರ ಕೆಲ ಮುಖಂಡರಿಂದ ಪ್ರತಿರೋಧ ವ್ಯಕ್ತವಾಯಿತು. ಯಾವುದೇ ಕಾರಣಕ್ಕೆ ಶಿವಸೇನೆ ಜತೆ ಮೈತ್ರಿಗೆ ಮುಂದಾಗಬಾರದು ಎಂದು ಪ್ರತಿವಾದ ಮಂಡಿಸಿದರು. ಕೆ.ಸಿ.ವೇಣುಗೋಪಾಲ್ ಕೂಡಾ ಕರ್ನಾಟಕದಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ವಿಫಲವಾಗಿರುವುದನ್ನು ಉಲ್ಲೇಖಿಸಿದರು. ಈ ಸಂಬಂಧ ಮಂಗಳವಾರ ಆ್ಯಂಟನಿ ಹಾಗೂ ವೇಣುಗೋಪಾಲ್ ಮತ್ತೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

ಸೋನಿಯಾ ಕೂಡಾ ಶಿವಸೇನೆ ಜತೆ ಮೈತ್ರಿ ಸಾಧ್ಯತೆಯನ್ನು ಅಲ್ಲಗಳೆದಿದ್ದರೂ, ರಾಜ್ಯ ಕಾಂಗ್ರೆಸ್ ಮುಖಂಡರ ಒಕ್ಕೊರಲ ಎಚ್ಚರಿಕೆಗೆ ಮಣಿದು ತಮ್ಮ ಬಿಗಿಪಟ್ಟು ಸಡಿಲಿಸಿದ್ದಾರೆ ಎನ್ನಲಾಗಿದೆ. ಮೈತ್ರಿಯ ವಿಧಿವಿಧಾನಗಳ ಬಗ್ಗೆ ಎನ್‌ಸಿಪಿ ಮುಖಂಡ ಶರದ್ ಪವಾರ್ ಜತೆ ಅವರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅದು ಇನ್ನೂ ಅಂತಿಮವಾಗಿಲ್ಲ ಎಂದು ಪವಾರ್ ಹೇಳಿದ್ದಾರೆ. ಈ ಸಂಬಂಧ ಪವಾರ್ ಜತೆ ಚರ್ಚಿಸಲು ಮೂವರು ಹಿರಿಯ ನಾಯಕರನ್ನು ರಾಜ್ಯಕ್ಕೆ ಕಳುಹಿಸಿಕೊಡಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News