ಕನ್ನಡ ಕಲಿಸದ 90 ಶಾಲೆಗಳಿಗೆ ನೋಟಿಸ್ ಜಾರಿ: ಶಿಕ್ಷಣ ಸಚಿವ ಸುರೇಶ್‌ ಕುಮಾರ್

Update: 2019-11-13 14:12 GMT

ಬೆಂಗಳೂರು, ನ.13: ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಇಲ್ಲವೆ ದ್ವಿತೀಯ ಭಾಷೆಯಾಗಿ ಕಲಿಸದ ಸುಮಾರು 90 ಶಾಲೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ಪರಿಶೀಲಿಸಿ ಆ ಶಾಲೆಗಳ ಮಾನ್ಯತೆ ರದ್ದು ಪಡಿಸುವುದರ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ಬುಧವಾರ ಸಮಗ್ರ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಕಲಿಕಾ ಕಾಯ್ದೆಯ ಪ್ರಕಾರ ಸಿಬಿಎಸ್ಸಿ, ಐಸಿಎಸ್ಸಿ ಸೇರಿದಂತೆ ಎಲ್ಲ ರೀತಿಯ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದು ಕಡ್ಡಾಯವಾಗಿದೆ. ಇದರಲ್ಲಿ ಯಾವುದೇ ರಾಜಿಯಿಲ್ಲವೆಂದು ತಿಳಿಸಿದರು.

ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ಕಲಿಸುವುದಕ್ಕೆ ವಿಫಲವಾಗಿರುವ 44 ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಹಾಗೂ ಈ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಕೊಡುವಂತೆ ಡಿಡಿಪಿಐಗಳಿಗೆ ಸೂಚಿಸಲಾಗಿದೆ. ಈ ವರದಿಯನ್ನು ನೋಡಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ ಎಲ್ಲ ವಿಧದ ಶಾಲೆಗಳಲ್ಲೂ ಕನ್ನಡವನ್ನು ಕಲಿಸಲಾಗುತ್ತಿದೆಯೇ, ಯಾವ ಸ್ವರೂಪದಲ್ಲಿ ಕಲಿಸಲಾಗುತ್ತಿದೆ ಎಂಬುದರ ಕುರಿತು ಪರಿಶೀಲನೆ ನಡೆಸುವುದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಉನ್ನತ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಇಲಾಖೆಯ ಆಯುಕ್ತರು, ಅಧಿಕಾರಿಗಳು ಇರುತ್ತಾರೆ. ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಕೆಲವು ಶಾಲೆಗಳಲ್ಲಿ ಕೇವಲ ನೆಪಕ್ಕೆ ಮಾತ್ರ ಕನ್ನಡ ಕಲಿಸುವುದರ ಬಗ್ಗೆ ಮಾಹಿತಿ ಇದೆ. ಇತಿಹಾಸ ಶಿಕ್ಷಕರೇ ಕನ್ನಡವನ್ನು ಕಲಿಸಲಾಗುತ್ತಿದೆ. ಇದು ಶಿಕ್ಷಣ ಕಾಯ್ದೆಯ ಪ್ರಕಾರ ಅಪರಾಧವಾಗಿದೆ. ಹೀಗಾಗಿ ಉನ್ನತ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಲಿದೆ. ಎಲ್ಲ ಜಿಲ್ಲೆಗಳಲ್ಲಿರುವ ಕೇಂದ್ರಾಡಳಿತ ಶಾಲೆಗಳಲ್ಲಿ ಕನ್ನಡವನ್ನು ಕಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು.

ಸಂವಿಧಾನ ದಿನಾಚರಣೆ: ಸರಕಾರದ ಎಲ್ಲ ಶಾಲೆಗಳಲ್ಲೂ ನ.26ರಂದು ಸಂವಿಧಾನದ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಪ್ರತಿ ಶಾಲೆಯಲ್ಲಿ ಬೆಳಗ್ಗೆ ಪ್ರಾರ್ಥನೆಯ ವೇಳೆ ಸಂವಿಧಾನದ ಪ್ರಸ್ತಾವನೆಯನ್ನು ಕಡ್ಡಾಯವಾಗಿ ಓದಬೇಕು. ಹಾಗೂ ಅದರ ಒಂದು ಪ್ರತಿಯನ್ನು ಶಾಲೆ ಆವರಣದಲ್ಲಿ ಎಲ್ಲರಿಗೂ ಕಾಣುವಂತೆ ಅಂಟಿಸಲಾಗುವುದು ಎಂದು ಅವರು ಹೇಳಿದರು.

ನ.20ರಿಂದ ಶಾಲೆಗಳ ಗಣತಿ ಆರಂಭ

ಕೇಂದ್ರ ಸರಕಾರ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಸಬಲೀಕರಣಕ್ಕಾಗಿ ನ.20ರಿಂದ ಡಿ.20ರವರೆಗೆ ದೇಶದ ಒಟ್ಟು 11.71ಲಕ್ಷ ಶಾಲೆಗಳ ಗಣತಿ ಕಾರ್ಯವನ್ನು ಆರಂಭಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 55,965 ಶಾಲೆಗಳ ಗಣತಿಕಾರ್ಯ ಆರಂಭವಾಗಲಿದೆ. ಸದ್ಯ ಶಾಲೆಗಳ ಮಾಹಿತಿ ಇಲಾಖೆಯ ಬಳಿಯಿದೆ. ಆದರೆ, ಅದು ಅರ್ಧ ಸತ್ಯದಿಂದ ಕೂಡಿದೆ. ಒಂದು ಶಾಲೆಯಲ್ಲಿ ಶೌಚಾಲಯ ಇದ್ದರೆ ಸಾಲದು, ಅದು ಹುಡುಗ-ಹುಡುಗಿಯರಿಗೆ ಪ್ರತ್ಯೇಕವಾಗಿ ಇದೆಯೇ, ನೀರಿನ ಸೌಲಭ್ಯ ಹೇಗಿದೆ. ಹೀಗೆ ಶಾಲೆಗಳ ಮೂಲಭೂತ ಅಗತ್ಯಗಳನ್ನು ಒಳಗೊಂಡ ಸುಮಾರು 65 ಪ್ರಶ್ನೆಗಳ ಅರ್ಜಿಯನ್ನು ಸಿದ್ದಪಡಿಸಲಾಗಿದೆ. ಶಾಲೆಗಳ ಗಣತಿ ಕಾರ್ಯಕ್ಕೆ ಶಾಲೆಯ ಶಿಕ್ಷಕರನ್ನು ನಿಯೋಜಿಸುವುದಿಲ್ಲ. ಬದಲಿಗೆ, ಡಯಟ್ ಸಿಬ್ಬಂದಿಗಳು ಹಾಗೂ ಅಲ್ಲಿ ಕಲಿಯುತ್ತಿರುವ ತರಬೇತಿ ನಿರತ ಶಿಕ್ಷಕರು, ಬಿಆರ್‌ಪಿ, ಸಿಆರ್‌ಪಿ ಅಧಿಕಾರಿಗಳನ್ನು ಒಳಗೊಂಡ 3,731 ತಂಡವನ್ನು ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News