ಕಾಫಿ ಕೃಷಿ ಭೂಮಿ ಭೋಗ್ಯಕ್ಕೆ ನೀಡುವ ಕಾಯ್ದೆ ತಿದ್ದುಪಡಿ: ಸಚಿವ ಸಿ.ಟಿ ರವಿ

Update: 2019-11-13 17:34 GMT

ಬೆಂಗಳೂರು, ನ.13: ಕಾಫಿ ಕೃಷಿ ಭೂಮಿಯನ್ನು ಭೋಗ್ಯಕ್ಕೆ ನೀಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾವ ಮಾಡಿದ್ದು, ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾಫಿ ಪ್ಲಾಂಟರ್ಸ್‌ ಅಸೋಸಿಯೇಷನ್‌ನ 61ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಉದ್ಯಮಿಗಳು ಕಾಫಿ ತೋಟಗಳನ್ನು ಕಡಿಮೆ ದರಕ್ಕೆ ಭೋಗ್ಯಕ್ಕೆ ಪಡೆದುಕೊಳ್ಳುತ್ತಾರೆ. ಮೊದಲೆರೆಡು ವರ್ಷ ಚೆನ್ನಾಗಿ ನೋಡಿಕೊಂಡು ನಂತರ ಇದರಿಂದ ಯಾವುದೇ ಲಾಭವಿಲ್ಲ ಎಂದು ಕಾಫಿ ತೋಟವನ್ನು ಸರಿಯಾಗಿ ನಿರ್ವಹಿಸದೆ ಹಾಳು ಮಾಡುತ್ತಾರೆ. ಇದರಿಂದ ಕಾಫಿ ಬೆಳೆಗೆ ಏಟು ಬೀಳುತ್ತಿದೆ. ಕೃಷಿಭೂಮಿ ಮಾಲಕ ರೈತನಿಗೆ ನಷ್ಟವಾಗುತ್ತದೆ. ಆದ್ದರಿಂದ ಕಾಫಿ ಬೆಳೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾಫಿ ಬೆಳೆಯುವ ಕೃಷಿ ಭೂಮಿಯನ್ನು ಭೋಗ್ಯಕ್ಕೆ ನೀಡುವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಾಫಿ ಉದ್ಯಮವನ್ನು ನಂಬಿಕೊಂಡು 10 ಲಕ್ಷಕ್ಕೂ ಹೆಚ್ಚು ಮಂದಿ ಜೀವನ ನಡೆಸುತ್ತಿದ್ದಾರೆ. ಈ ಉದ್ಯಮಕ್ಕೆ ಪೆಟ್ಟು ಬಿದ್ದರೆ ಲಕ್ಷಾಂತರ ಮಂದಿಗೆ ಪರ್ಯಾಯ ಉದ್ಯೋಗ ಕಲ್ಪಿಸುವುದು ಅಸಾಧ್ಯ. ಆದ್ದರಿಂದ ಸರಕಾರದ ವತಿಯಿಂದ ಕಾಫಿ ಬೆಳಗಾರರ ಅಭಿವೃದ್ಧಿಗೆ ಸಹಕರಿಸಲಾಗುವುದು ಎಂದು ತಿಳಿಸಿದರು.

ಕಾಫಿ ಬೆಳೆಗಾರರು ಸುರಕ್ಷತೆ ದೃಷ್ಟಿಯಿಂದ ಆಯುಧಗಳನ್ನು ಇಟ್ಟುಕೊಂಡಿರುತ್ತಾರೆ. ಯಾರಿಗೆ ಕ್ರಿಮಿನಲ್ ಹಿನ್ನೆಲೆ ಇರುತ್ತದೆಯೋ ಅಂತಹವರ ಆಯುಧಗಳನ್ನು ವಶಪಡಿಸಿಕೊಳ್ಳಲಿ. ಆದರೆ, ಉತ್ತಮ ನಾಗರಿಕರ ಆಯುಧಗಳನ್ನು ವಶಪಡಿಸಿಕೊಳ್ಳದಿರಲು ಕಾಯ್ದೆಯಲ್ಲಿ ಸಣ್ಣದೊಂದು ತಿದ್ದುಪಡಿ ತರುವ ಅಗತ್ಯವಿದೆ ಎಂದು ತಿಳಿಸಿದರು.

ಕಾಫಿಗೆ ಹೆಚ್ಚು ಚಿಕೋರಿಯನ್ನು ಬೆರೆಸಿ, ಮಾರಾಟ ಮಾಡುವುದನ್ನು ಆಹಾರ ಕಲಬೆರಕೆ ಕಾಯ್ದೆಯಡಿ ಜಾರಿಗೆ ತರಬೇಕು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಹೊಟೇಲ್‌ಗಳಲ್ಲಿ ಕಾಫಿ ಮತ್ತು ಚಿಕೋರಿಯನ್ನು ಪ್ರತ್ಯೇಕವಾಗಿ ಇಡುವ ಪದ್ಧತಿ ಆರಂಭವಾಗಬೇಕು. ಅಗತ್ಯವಿದ್ದವರು ಕಾಫಿಗೆ ಚಿಕೋರಿಯನ್ನು ಬೆರಸಿಕೊಳ್ಳಬೇಕು. ಕಾಫಿಗೆ ಶೇ.30ರಷ್ಟು ಚಿಕೋರಿಯನ್ನು ಬೆರಸಲಾಗುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಶೇ.90ರಷ್ಟಕ್ಕೆ ಏರಿಕೆಯಾಗಿದೆ. ಇದರಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಫಿ ಉದ್ಯಮಕ್ಕೆ 25 ಲಕ್ಷ ರೂ. ಸಾಲಕ್ಕೆ ಶೇ.6ರಷ್ಟು ಬಡ್ಡಿ ವಿಧಿಸಬೇಕೆಂಬ ಬೇಡಿಕೆ ರಾಜ್ಯ ಸರಕಾರದ ಕೈಯಲ್ಲಿ ಇಲ್ಲ. ಈ ಕುರಿತು ಕೇಂದ್ರ ಸರಕಾರದ ಸಚಿವರೊಂದಿಗೆ ಮಾತುಕತೆ ನಡೆಸಿ, ಉತ್ತಮ ಸಾಲ ಸೌಲಭ್ಯಕ್ಕೆ ಅನುವು ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ಲಾಂಟರ್ ಅಸೋಸಿಯೇಷನ್ ಅಧ್ಯಕ್ಷ ಎಂ. ಗಣಪತಿ, ಉಪಾಧ್ಯಕ್ಷ ಶಿರಸ್ ಜಯೇಂದ್ರ ಮತ್ತಿತರರಿದ್ದರು.

ನೆರೆ ಹಾವಳಿಯಿಂದ ಕಾಫಿ ಬೆಳೆ ಕೂಡ ನಾಶವಾಗಿದೆ. ಆದರೆ, ಕೇಂದ್ರದ ಬೆಳೆ ವಿಮಾ ವ್ಯಾಪ್ತಿಗೆ ಕಾಫಿ ಬೆಳೆ ಒಳಪಡದೇ ಇರುವುದರಿಂದ ಪರ್ಯಾಯ ಮೊತ್ತವು ನಿರೀಕ್ಷಿಸದಷ್ಟು ಸಿಗುತ್ತಿಲ್ಲ. ಕಾಫಿ ಬೆಳೆಗಾರರು ಒಪ್ಪುವುದಾದರೆ ಕಾಫಿ ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲಾಗುವುದು. ಈ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

-ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News