ಶಿವಸೇನೆ ಜೊತೆಗಿನ ಒಪ್ಪಂದವನ್ನು ಮೋದಿಯಿಂದ ಅಮಿತ್ ಶಾ ಮುಚ್ಚಿಟ್ಟಿದ್ದರು: ಸಂಜಯ್ ರಾವತ್

Update: 2019-11-14 11:55 GMT

ಮುಂಬೈ:  ಶಿವಸೇನೆಯೊಂದಿಗೆ ತಾನು ಚರ್ಚಿಸಿದ್ದ ಅಧಿಕಾರ ಹಂಚಿಕೆ ಒಪ್ಪಂದವನ್ನು  ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿಯಿಂದ ಮುಚ್ಚಿಟ್ಟಿದ್ದರೆಂಬ ಗಂಭೀರ ಆರೋಪವನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಮಾಡಿದ್ದಾರೆ.

ಚುನಾವಣಾ ಪ್ರಚಾರಾಭಿಯಾನದ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ  ಸತತವಾಗಿ ದೇವೇಂದ್ರ ಫಡ್ನವೀಸ್ ಆವರೇ ಮುಖ್ಯಮಂತ್ರಿಯಾಗಲಿದ್ದಾರೆಂದು ಹೇಳಿದಾಗಲೂ  ಶಿವಸೇನೆ ಏಕೆ ಮಾತನಾಡಿಲ್ಲ ಎಂದು ಬುಧವಾರ ಅಮಿತ್ ಶಾ ಶಿವಸೇನೆಯನ್ನು ತರಾಟೆಗೆ ತೆಗೆದುಕೊಂಡ ನಂತರ ರಾವತ್ ಪ್ರಶ್ನಿಸಿದ್ದಾರೆ.

``ಶಿವಸೇನೆಯಿಂದ ಮುಖ್ಯಮಂತ್ರಿ ಇರಲಿದ್ದಾರೆಂದು ಉದ್ಧವ್ ಠಾಕ್ರೆ ಹೇಳುವಾಗ ಬಿಜೆಪಿಯೇಕೆ ಆಗ ಆಕ್ಷೇಪಿಸಿರಲಿಲ್ಲ?'' ಎಂದೂ ರಾವತ್ ಮರುಪ್ರಶ್ನಿಸಿದ್ದಾರೆ.

``ನಮಗೆ ಮೋದಿ ಬಗ್ಗೆ ಬಹಳಷ್ಟು ಗೌರವವಿದೆ ಆದುದರಿಂದ ಅವರ ಹೇಳಿಕೆಗಳನ್ನು ವಿರೋಧಿಸುವುದು ಅಪಮಾನಕಾರಿಯಾಗುತ್ತಿತ್ತು. ಅಮಿತ್ ಶಾ ಅವರು ತಾವು ಶಿವಸೇನೆ ಜತೆ ಸಭೆಯಲ್ಲಿ  ಯಾವ ಒಪ್ಪಂದಕ್ಕೆ ಬಂದಿದ್ದಾರೆಂಬುದನ್ನು  ಮೋದಿಗೆ ಹೇಳಿಲ್ಲ ಎಂದು ಕಾಣಿಸುತ್ತದೆ'' ಎಂದು ರಾವತ್ ಹೇಳಿದರು.

 ಕೆಲ ಶಕ್ತಿಗಳು ಪ್ರಧಾನಿ ಮೋದಿ ಹಾಗೂ ಉದ್ಧವ್ ಠಾಕ್ರೆ ನಡುವೆ ಬಿರುಕು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಅಮಿತ್ ಶಾ ಅವರನ್ನು ಉಲ್ಲೇಖಿಸದೆಯೇ ರಾವತ್ ಹೇಳಿದರು.

ಮಾತುಕತೆಗಳು ನಡೆದ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀಯ ಕೊಠಡಿ ಸೇನೆಯ ಸ್ಥಾಪಕ ಬಾಳ್ ಠಾಕ್ರೆ ಅವರದ್ದಾಗಿತ್ತು ಹಾಗೂ ಅದು ಪಕ್ಷಕ್ಕೆ ದೇಗುಲ ಸಮಾನವಾಗಿದೆ ಎಂದೂ ರಾವತ್  ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News