'ಆಕಸ್ಮಿಕ ಘಟನೆಗಳಿಂದ ಗಾಂಧಿ ಮೃತಪಟ್ಟರು' ಎಂದ ಸರಕಾರಿ ಪುಸ್ತಿಕೆ!

Update: 2019-11-14 10:50 GMT

Photo: scroll.in
 

ಭುಬನೇಶ್ವರ್, ನ.14: ಮಹಾತ್ಮ ಗಾಂಧಿಯವರನ್ನು ನಾಥೂರಾಂ ಗೋಡ್ಸೆ ಜನವರಿ 30, 1948ರಂದು ರಾಜಧಾನಿಯ ಬಿರ್ಲಾ ಹೌಸ್‍ ನಲ್ಲಿ ನಡೆದ ಪ್ರಾರ್ಥನಾ ಸಭೆಯ ಸಂದರ್ಭ ಗುಂಡಿಕ್ಕಿ ಹತ್ಯೆಗೈದ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದು. ಆದರೆ  ಒಡಿಶಾದ ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿದ ಪುಸ್ತಿಕೆಯಲ್ಲಿ ಗಾಂಧಿ `ಆಕಸ್ಮಿಕವಾಗಿ' ಸಾವನ್ನಪ್ಪಿದ್ದರು ಎಂದು ಬರೆಯಲಾಗಿದೆ. ಹಲವಾರು ಛಾಯಾಚಿತ್ರಗಳನ್ನು ಹೊಂದಿರುವ ಈ ಬಣ್ಣಬಣ್ಣದ ಪುಸ್ತಿಕೆಯನ್ನು  ರಾಜ್ಯದ ಎಲ್ಲಾ ಶಾಲೆಗಳಲ್ಲೂ ವಿತರಿಸಲಾಗುತ್ತಿದೆ.

`ಆಮ ಬಾಪೂಜಿ : ಅಕಾ ಝಲಕ" ( ನಮ್ಮ ಬಾಪೂಜಿ : ಒಂದು ಇಣುಕುನೋಟ) ಎಂಬ ಶೀರ್ಷಿಕೆಯ ಈ ಎರಡು ಪುಟದ ಪುಸ್ತಿಕೆಯನ್ನು ಮಹಾತ್ಮ ಗಾಂಧಿಯವರ 150ನೇ ಜಯಂತಿ ಪ್ರಯುಕ್ತ ಬಿಡುಗಡೆಗೊಳಿಸಲಾಗಿದ್ದು, ಅದರಲ್ಲಿ  ಜನವರಿ 30, 1948ರಂದು ``ಆಕಸ್ಮಿಕ ಘಟನಾವಳಿಗಳಿಂದಾಗಿ'' ಗಾಂಧಿ ಮೃತಪಟ್ಟರು ಎಂದು ಬರೆಯಲಾಗಿದೆ.

ಈ ಪುಸ್ತಿಕೆ ಇದೀಗ ವಿವಾದಕ್ಕೀಡಾಗಿದ್ದು ಇದು ಇತಿಹಾಸವನ್ನು ತಿರುಚುವ ಯತ್ನ ಎಂದು  ಒಡಿಶಾದ ಹಲವಾರು ಹೋರಾಟಗಾರರು ಆರೋಪಿಸಿದ್ದಾರಲ್ಲದೆ, ಪುಸ್ತಿಕೆಯನ್ನು ತಕ್ಷಣ ವಾಪಸ್ ಪಡೆಯಬೇಕು ಹಾಗೂ  ಒಡಿಶಾದ ಶಾಲಾ ಮತ್ತು ಸಾಮೂಹಿಕ  ಶಿಕ್ಷಣ ಸಚಿವ ಸಮೀರ್ ದಶ್  ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ, ಇದು ಇತಿಹಾಸ ತಿರುಚುವ ಯತ್ನವಲ್ಲ ಎಂದು  ಸ್ಪಷ್ಟ ಪಡಿಸಿದ್ದಾರೆ. 'ಆಕಸ್ಮಿಕ ಘಟನಾವಳಿಗಳಿಂದಾಗಿ' ಮಹಾತ್ಮ ಗಾಂಧಿ ಮೃತಪಟ್ಟರೆಂದು ``ಮಕ್ಕಳ ಸೂಕ್ಷ್ಮ ಭಾವನೆಗಳಿಗೆ ಘಾಸಿಯಾಗದಂತೆ'' ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News