ಉಪಚುನಾವಣೆ ಫಲಿತಾಂಶದ ಬಳಿಕ ಹೊಸ ರಾಜಕೀಯ ಆಟ ಆರಂಭ: ಕುಮಾರಸ್ವಾಮಿ

Update: 2019-11-14 11:52 GMT

ಬೆಂಗಳೂರು, ನ. 14: ‘ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಹೋರಾಟ ಬೇರೆ. ಆದರೆ, ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅನರ್ಹರನ್ನು ಸೋಲಿಸುವುದೇ ನನ್ನ ಮುಖ್ಯ ಗುರಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

ಗುರುವಾರ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ನಾಳೆ(ನ.15) ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಹದಿನೈದು ಕ್ಷೇತ್ರಗಳಲ್ಲಿಯೂ ಪಕ್ಷದ ಶಾಸಕರಿಗೆ ಜವಾಬ್ದಾರಿ ನೀಡಲಾಗುವುದು ಎಂದರು.

ವ್ಯಾಮೋಹ ಇಲ್ಲ: ನನಗೆ ಬಿಜೆಪಿಯ ಮೇಲಾಗಲಿ ಅಥವಾ ಕಾಂಗ್ರೆಸ್ ಪಕ್ಷದ ಮೇಲಾಗಲಿ ಯಾವುದೇ ವ್ಯಾಮೋಹ ಇಲ್ಲ ಎಂದು ಸ್ಪಷ್ಟಣೆ ನೀಡಿದ ಕುಮಾರಸ್ವಾಮಿ, ನನ್ನ ನೇತೃತ್ವದ ಸರಕಾರ ತೆಗೆದವರನ್ನು ಸೋಲಿಸುವುದೇ ನನ್ನ ಗುರಿ. ಅದಕ್ಕೆ ಬೇಕಾದ ರಣತಂತ್ರ ರೂಪಿಸಿದ್ದೇನೆ ಎಂದರು.

ನಾವು ಶರಣಾಗಿಲ್ಲ: ಬಿಎಸ್‌ವೈ ಸಿಎಂ ಮತ್ತು ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ಮೂರುವರೆ ವರ್ಷ ಅಬಾಧಿತ ಎಂಬ ದೇವೇಗೌಡರ ಹೇಳಿಕೆಗೆ ಅಪಾರ್ಥ ಬೇಡ. ಅದು ಅವರ ರಾಜಕೀಯದ ಒಳನೋಟ ಇರಬಹುದು. ಹಾಗೆಂದು ನಾವು ಬಿಜೆಪಿಗೆ ಶರಣಾಗಿದ್ದೇವೆಂದು ಭಾವಿಸಬೇಕಿಲ್ಲ. ಅವರೊಂದಿಗೆ ಕೈಜೋಡಿಸುವ ಪ್ರಶ್ನೆಯೆ ಇಲ್ಲ ಎಂದರು.

ಬಂಡೆ ಎಳೆದುಕೊಂಡರು: ಸಿದ್ದರಾಮಯ್ಯನವರು ತಮ್ಮ ಅಹಂಕಾರ, ಬಾಡಿ ಲಾಂಗ್ವೇಜ್ ಬದಲಾವಣೆ ಮಾಡಿಕೊಳ್ಳಬೇಕು. ಶ್ರೀರಾಮುಲು ಮತ್ತು ಯಡಿಯೂರಪ್ಪ ಬೇರೆ ಪಕ್ಷ ಕಟ್ಟಿದ್ದರಿಂದ ನೀವು ಅಧಿಕಾರಕ್ಕೆ ಬಂದಿದ್ದೀರಿ. ನಮ್ಮನ್ನು ಮುಗಿಸಲು ಹೋಗಿ ಅವರ ಮೇಲೆಯೇ ಕಲ್ಲು ಬಂಡೆ ಎಳೆದುಕೊಂಡರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ 105 ಸ್ಥಾನ ಬರಲು ನೀವೇ ಕಾರಣ. ಕಾಂಗ್ರೆಸ್ ಮತ್ತು ಬಿಜೆಪಿಗೆ ಬೇಕಾದಾಗ ನಮ್ಮ ಮೇಲೆ ವ್ಯಾಮೋಹ ಬರುತ್ತದೆ. ಡಾ.ಸುಧಾಕರ್ ಹಾಗೂ ಯೋಗೇಶ್ವರ್ ನಮ್ಮ ಬೆಂಬಲ ಬೇಕೆಂದು ಹಿಂದೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು.

ರಾಜಕೀಯದಲ್ಲಿ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ಪ್ರಸಕ್ತ ರಾಜಕೀಯ ಮತ್ತು ಮುಂದಿನ ನಮ್ಮ ಪಕ್ಷದ ಹಿತದೃಷ್ಟಿಯಿಂದ ಹೊಸಕೋಟೆ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡಗೆ ಜೆಡಿಎಸ್ ಬೆಂಬಲ ಘೋಷಿಸಲಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಪ್ರಚಾರಕ್ಕೂ ತೆರಳುವೆ. ಶರತ್ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು.

ಹೊಸ ರಾಜಕೀಯ ಆಟ:

‘ರಾಷ್ಟ್ರೀಯ ಪಕ್ಷಗಳ ಜತೆ ಕೈ ಜೋಡಿಸುವುದಿಲ್ಲ. ಉಪಚುನಾವಣೆಯಲ್ಲಿ 7 ಸ್ಥಾನಗಳನ್ನು ಗೆದ್ದರೆ ಮಾತ್ರ ಬಿಎಸ್‌ವೈ ಸರಕಾರ ಬಹುಮತ ಪಡೆಯಲಿದೆ. ಇಲ್ಲವಾದರೆ ಡಿ.10ರ ಉಪಚುನಾವಣೆ ಫಲಿತಾಂಶದ ಬಳಿಕ ಹೊಸ ರಾಜಕೀಯ ಆಟ ಆರಂಭವಾಗಲಿದೆ’

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News