ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಐತಿಹಾಸಿಕ: ಸಿಎಂ ಯಡಿಯೂರಪ್ಪ

Update: 2019-11-14 16:08 GMT

ಬೆಂಗಳೂರು, ನ.14: ಕಾಂಗ್ರೆಸ್-ಜೆಡಿಎಸ್‌ಗೆ ರಾಜೀನಾಮೆ ನೀಡಿರುವ 16 ಅನರ್ಹ ಶಾಸಕರು ಇಂದು(ನ.14) ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದು ಐತಿಹಾಸಿಕ ದಿನವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು. 

ಗುರುವಾರ ನಗರದ ಬಿಜೆಪಿ ಕಚೇರಿ ಮುಂಭಾಗ ಅನರ್ಹ ಶಾಸಕರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿ ಮಾತನಾಡಿದ ಅವರು, ದೇಶದ ರಾಜಕಾರಣದಲ್ಲಿ ಈ ರೀತಿ 16-17 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ಹೀಗಾಗಿ ಅನರ್ಹ ಶಾಸಕರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ ಎಂದರು.

ಕಾಂಗ್ರೆಸ್-ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ನಮ್ಮ ಜೊತೆಗೆ ಬಂದಿರುವ ಅನರ್ಹ ಶಾಸಕರಿಗೆ ಹಾಗೂ ಅವರ ಬೆಂಬಲಿಗರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪರವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಭರವಸೆ ಕೊಡುತ್ತೇನೆ. ನಾವು ಕೊಟ್ಟಿರುವ ಭರವಸೆಯನ್ನು ಅಕ್ಷರಶಃ ಈಡೇರಿಸುತ್ತೇವೆ. ಯಾವ ಕಾರಣಕ್ಕೂ ವಿಶ್ವಾಸ ದ್ರೋಹ ಮಾಡುವುದಿಲ್ಲವೆಂದು ಅವರು ಅಭಯ ನೀಡಿದರು.

ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕೈಜೋಡಿಸಿ ಮನವಿ ಮಾಡುತ್ತೇನೆ. ಒಡಕಿನ ಮಾತು ಆಡದೆ ತನು, ಮನ, ಧನದಿಂದ ಮುಂದೆ ನಡೆಯುವ ವಿಧಾನಸಭೆ ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಗೆಲುವಿಗೆ ಕಂಕಣ ಬದ್ಧರಾಗಬೇಕೆಂದು ಅವರು ಹೇಳಿದರು.

ಡಿ.5ಕ್ಕೆ ವಿಧಾನಸಭಾ ಉಪಚುನಾವಣೆ, 9ಕ್ಕೆ ಫಲಿತಾಂಶ ಹೊರಬೀಳಲಿದ್ದು, 15ಕ್ಕೆ 15 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಗೆದ್ದ ಎಲ್ಲ ಶಾಸಕರಿಗೆ ಬೃಹತ್ ಮೈದಾನದಲ್ಲಿ 1 ಲಕ್ಷ ಜನರನ್ನು ಸೇರಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಆ ಮೂಲಕ ಅನರ್ಹ ಶಾಸಕರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳುತ್ತೇವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆಯ ಉಪಚುನಾವಣೆಯಲ್ಲಿ ನಮ್ಮೆಲ್ಲ ಸಂಸದರು ಮತ್ತು ಕಾರ್ಯಕರ್ತರು ನಿಮ್ಮ ಜೊತೆಗೆ ಇರುತ್ತಾರೆ. ಕೇಂದ್ರದ ನಾಯಕತ್ವ ನಿಮ್ಮ ಜೊತೆಗಿದೆ. ನೀವು ಅಧೀರರಾಗಬೇಕಿಲ್ಲ ಎಂದು ಯಡಿಯೂರಪ್ಪ ಅನರ್ಹ ಶಾಸಕರಲ್ಲಿ ಆತ್ಮವಿಶ್ವಾಸ ತುಂಬಿದರು.

ರಾಜ್ಯ ಬಿಜೆಪಿಯ ಉಸ್ತುವಾರಿ ಮುರಳೀಧರ ರಾವ್ ಮಾತನಾಡಿ, ದೇಶದ ರಾಜಕಾರಣದಲ್ಲಿ ಹಾಗೂ ಬಿಜೆಪಿಯ ರಾಜಕೀಯದಲ್ಲಿ ಕರ್ನಾಟಕಕ್ಕೆ ಪ್ರಧಾನ ಆದ್ಯತೆ ಇದೆ. ಬಿಜೆಪಿ ಪಾಲಿಗೆ ಕರ್ನಾಟಕವು ದಕ್ಷಿಣ ಭಾರತದ ಹೆಬ್ಬಾಗಿಲು ಇದ್ದಂತೆ. ಹೀಗಾಗಿ ಈಗ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಅನರ್ಹ ಶಾಸಕರನ್ನು ಉಪಚುನಾವಣೆಯಲ್ಲಿ ಗೆಲ್ಲಿಸುವುದು ಬಿಜೆಪಿ ಆದ್ಯತೆಯ ಪ್ರಶ್ನೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಕಂದಾಯ ಸಚಿವ ಆರ್.ಅಶೋಕ್, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಮುಖಂಡರು, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News