ಬಿಜೆಪಿ ನಾಯಕ ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ

Update: 2019-11-14 18:09 GMT

ಬೆಂಗಳೂರು, ನ. 14: ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರಕ್ಕೆ ಶ್ರೀಮಂತ ಪಾಟೀಲ್‌ಗೆ ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಮಾಜಿ ಶಾಸಕ ಭರಮಗೌಡ (ರಾಜು) ಕಾಗೆ ಪಕ್ಷ ತ್ಯಜಿಸಿ ಗುರುವಾರ ಸಂಜೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಗುರುವಾರ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಸ್.ಆರ್.ಪಾಟೀಲ್, ಸತೀಶ್ ಜಾರಕಿಹೊಳಿ ಬಿಜೆಪಿಯ ರಾಜು ಕಾಗೆ ಅವರಿಗೆ ಪಕ್ಷ ಬಾವುಟ ನೀಡಿ ಕಾಂಗ್ರೆಸ್‌ಗೆ ಬರಮಾಡಿಕೊಂಡರು.

ಅನರ್ಹತೆ ಕಳಂಕ ಹೊತ್ತೇ ಚುನಾವಣೆ ಎದುರಿಸಬೇಕು: ಅನರ್ಹ ಶಾಸಕರು ‘ಅನರ್ಹತೆ’ ಕಳಂಕವನ್ನು ಹೊತ್ತುಕೊಂಡೇ ಉಪಚುನಾವಣೆ ಎದುರಿಸಬೇಕಿದ್ದು, ಇವರನ್ನು ಗೆಲ್ಲಿಸಬೇಕೇ ಅಥವಾ ಬೇಡವೇ ಎಂದು ಜನತೆ ತೀರ್ಮಾನಿಸಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ರಾಜುಕಾಗೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹಿರಿಯ ರಾಜಕಾರಣಿ, ಸಭ್ಯ ವ್ಯಕ್ತಿತ್ವದ ರಾಜು ಕಾಗೆ ಅವರು ಯಾವುದೇ ಷರತ್ತಿಲ್ಲದೆ ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರನ್ನು ಸ್ವಾಗತಿಸುತ್ತೇನೆ ಎಂದರು.

ಆರು ಬಾರಿ ಚುನಾವಣೆಗೆ ಸ್ಪರ್ಧಿಸಿರುವ ರಾಜು ಕಾಗೆ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಗವಾಡ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಶ್ರೀಮಂತರ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅನರ್ಹರಾಗಿದ್ದಾರೆ. ರಾಜು ಕಾಗೆ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ. ಉಪಚುನಾವಣೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದ ಅವರು, ರಾಜು ಕಾಗೆ ಅವರು ಪಕ್ಷ ಸಂಘಟನೆಗೆ ಶ್ರಮಿಸಲಿ ಎಂದು ಸಲಹೆ ಮಾಡಿದರು.

‘ಅಧಿಕೃತವಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ನನಗೆ ಅವಕಾಶ ನೀಡಿದ ಪಕ್ಷದ ಎಲ್ಲ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಅಲ್ಲದೆ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ’

-ರಾಜು ಕಾಗೆ, ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News