ಮೈತ್ರಿ ಸರಕಾರದ ರಾಕ್ಷಸ ಆಡಳಿತವನ್ನು ಕೊನೆಗಾಣಿಸಲು ರಾಜೀನಾಮೆ: ಅನರ್ಹ ಶಾಸಕ ವಿಶ್ವನಾಥ್

Update: 2019-11-14 14:49 GMT

ಬೆಂಗಳೂರು, ನ.14: ನಾವು ಜೆಡಿಎಸ್-ಕಾಂಗ್ರೆಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅಧಿಕಾರಕ್ಕಾಗಿ ಅಲ್ಲ. ಸಮ್ಮಿಶ್ರ ಸರಕಾರದ ರಾಕ್ಷಸ ಆಡಳಿತವನ್ನು ಕೊನೆಗಾಣಿಸಲಿಕ್ಕೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ತಿಳಿಸಿದ್ದಾರೆ. 

ಗುರುವಾರ ನಗರದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಮ್ಮನ್ನು ರಾಜ್ಯ ರಾಜಕಾರಣದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಹುನ್ನಾರ ನಡೆಸಿತ್ತು. ಆದರೆ, ಸುಪ್ರೀಂ ಕೋರ್ಟ್ ಅದಕ್ಕೆ ಅವಕಾಶ ಕೊಟ್ಟಿಲ್ಲ. ಇದರಿಂದ ಆ ಪಕ್ಷಗಳ ನಾಯಕರಿಗೆ ಮುಜುಗರವಾಗಿದೆ ಎಂದು ತಿಳಿಸಿದರು.

ಈಗ ನಾವು ಬಿಜೆಪಿಗೆ ಹೋಗುತ್ತಿರುವುದು ಪಕ್ಷಾಂತರವಲ್ಲ. ರಾಜಕೀಯ ದೃವೀಕರಣವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ 26 ಸಂಸದರು ಆಯ್ಕೆಯಾದರು. ಅದನ್ನು ರಾಜ್ಯದ ಜನ ಪಕ್ಷಾಂತರ ಮಾಡಿದರು ಎಂದು ವ್ಯಾಖ್ಯಾನಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿಯ ಕನಸಿನ ಭಾರತವನ್ನು ಕಟ್ಟಲು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪಗೆ ಶಕ್ತಿತುಂಬಲು, ಭುಜಕ್ಕೆ ಭುಜ ಕೊಟ್ಟು ದುಡಿಯುವುದಕ್ಕಾಗಿ ಬಿಜೆಪಿ ಸೇರ್ಪಡೆಗೊಂಡಿದ್ದೇವೆಯೇ ಹೊರತು ಇದರಲ್ಲಿ ಯಾವುದೇ ಸ್ವಾರ್ಥ ರಾಜಕೀಯ ಇಲ್ಲವೆಂದು ಅವರು ಸಮರ್ಥಿಸಿಕೊಂಡರು.

ಅನರ್ಹ ಶಾಸಕ ಕೆ.ಸುಧಾಕರ್ ಮಾತನಾಡಿ, ಕಾಂಗ್ರೆಸ್, ಜೆಡಿಎಸ್‌ನಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಹೀಗಾಗಿ ರಾಜೀನಾಮೆ ಕೊಡಬೇಕಾಯಿತು. ಈಗ ಸುಪ್ರೀಂ ಕೋರ್ಟ್ ನಮಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಆ ಮೂಲಕ ಮಾಜಿ ಸಭಾಧ್ಯಕ್ಷರಿಗೆ ಕಪಾಳಮೋಕ್ಷ ಮಾಡಿದೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್-ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿರುವ ಎಲ್ಲ ಅನರ್ಹ ಶಾಸಕರನ್ನು ಕಾಯಾ, ವಾಚ, ಮನಸಿನಿಂದ ಸ್ವೀಕರಿಸಿದ್ದೇವೆ. ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಒಟ್ಟು ಶ್ರಮದಿಂದ ಅನರ್ಹ ಶಾಸಕರನ್ನು ಗೆಲ್ಲಿಸಲಿದ್ದೇವೆ. ಈ ಬಗ್ಗೆ ಯಾರಿಗೂ ಆತಂಕ ಬೇಡ.

-ನಳಿನ್‌ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News