ಮಹಾರಾಷ್ಟ್ರ: ಸಾಮಾನ್ಯ ಕನಿಷ್ಟ ಕಾರ್ಯಸೂಚಿಗೆ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಸಮಾಲೋಚನೆ

Update: 2019-11-14 15:39 GMT
ಫೋಟೊ: indiatoday.in

ಮುಂಬೈ, ನ.14: ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಉತ್ಸಾಹದಲ್ಲಿರುವ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು, ಮೈತ್ರಿಸರಕಾರದ ಸುಗಮ ಕಾರ್ಯನಿರ್ವಹಣೆಗಾಗಿ ಸಾಮಾನ್ಯ ಕನಿಷ್ಟ ಕಾರ್ಯಸೂಚಿ(ಸಿಎಂಪಿ)ಯನ್ನು ಅಂತಿಮಗೊಳಿಸಲು ಸಮಾಲೋಚನೆ ಮುಂದುವರಿಸಿದ್ದಾರೆ.

 ಸಾಮಾನ್ಯ ಕನಿಷ್ಟ ಕಾರ್ಯಸೂಚಿಯ ಕರಡು ಪ್ರತಿಯನ್ನು ಮೂರೂ ಪಕ್ಷದ ಉನ್ನತ ಮುಖಂಡರು ಅನುಮೋದಿಸಿದ ಬಳಿಕ ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ಹೇಳಿದ್ದಾರೆ.

ಈ ಮಧ್ಯೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ನಡುವೆ ಬುಧವಾರ ನಿಗದಿಯಾಗಿದ್ದ ಮಾತುಕತೆ ರದ್ದಾಗಿದೆ ಎಂದು ಎನ್‌ಸಿಪಿ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿದ್ದರು. ಶಿವಸೇನೆಯ ಜೊತೆ ಸೇರಿ ಸರಕಾರ ರಚಿಸುವ ವಿಷಯದಲ್ಲಿ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಊಹಾಪೋಹ ಹಬ್ಬಿತ್ತು. ಆದರೆ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಮಾಧ್ಯಮದವರನ್ನು ತಪ್ಪಿಸಲು ಅಜಿತ್ ಈ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದರು.

ಮಂಗಳವಾರ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಮಧ್ಯೆ ಮಾತುಕತೆ ನಡೆದಿದ್ದು ಒಪ್ಪಂದಕ್ಕೆ ಬರಲಾಗಿದೆ ಎಂಬ ವರದಿಯನ್ನು ಶಿವಸೇನೆಯ ಮುಖಂಡ ಸಂಜಯ್ ರಾವತ್ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News