ಸೈಬರ್ ಅಪರಾಧಗಳ ಹೆಚ್ಚಳ ಕಳವಳಕಾರಿ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2019-11-14 15:58 GMT

ಬೆಂಗಳೂರು, ನ.14: ತಂತ್ರಜ್ಞಾನ ಬೆಳೆದಂತೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ಇದು ಪೊಲೀಸ್ ಇಲಾಖೆಗೂ ಸವಾಲಿನ ಕೆಲಸ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಅಂತರ್‌ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆ ನಿರ್ವಾಹಣಾ ಸಂಸ್ಥೆ (ಐಐಎಸ್‌ಎಸ್‌ಎಂ) ವತಿಯಿಂದ ಇಂದಿನಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಭದ್ರತೆ ಮತ್ತು ಸುರಕ್ಷತೆ ಕುರಿತು 29ನೆ ಜಾಗತಿಕ ಸಮ್ಮೇಳನವನ್ನುದ್ದೇಶಿಸಿ ಅವರು ಮಾತನಾಡಿದರು.

ನೆಟ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್‌ಗಳ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ದಿನನಿತ್ಯದ ಅಪರಾಧ ಚಟುವಟಿಕೆಗಳಿಗಿಂತಲೂ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಜಾಗೃತವಾಗಿದೆ ಎಂದರು.

ಅನಾಮಧೇಯ ಮೊಬೈಲ್ ಸಂಖ್ಯೆಗಳು, ವಾಹನಗಳ ನಕಲಿ ನೋಂದಣಿಗಳನ್ನು ಇಂತಹ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತಿದೆ. ಇದರ ಜಾಡು ಹಿಡಿಯುವುದು ಇಲಾಖೆಗೂ ಸವಾಲಿನ ಕೆಲಸವಾಗಿದೆ ಎಂದ ಅವರು, ಸೈಬರ್ ಕ್ರೈಂ ಚಟುವಟಿಕೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನಾರ್ಹ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಸಭಾ ಸದಸ್ಯರೂ ಆಗಿರುವ ಐಐಎಸ್‌ಎಸ್‌ಎಂ ಕಾರ್ಯ ನಿರ್ವಾಹಕ ಅಧ್ಯಕ್ಷ ಆರ್.ಕೆ.ಸಿನ್ಹಾ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಮ್ಮ ಮುಂದೆ ಹಲವು ಸವಾಲುಗಳಿದ್ದು, ಅದನ್ನು ತಂತ್ರಜ್ಞಾನದ ಮೂಲಕವೇ ಎದುರಿಸಬೇಕಾಗಿದೆ ಎಂದರು.

ಸೈಬರ್ ಭಯೋತ್ಪಾದನೆ ಎನ್ನುವುದು ಬಹುದೊಡ್ಡ ಜಾಲವಾಗಿದ್ದು, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಮತ್ತು ವಿಡಿಯೊಗಳನ್ನು ಹರಿಬಿಡಲಾಗುತ್ತಿದೆ. ಇದನ್ನೇ ಕೆಲವರು ನಂಬಿ, ಗಲಾಟೆ ಮಾಡುತ್ತಾರೆ. ಬಳಿಕ, ಇದನ್ನು ತನಿಖೆಗೊಳಪಡಿಸಿದಾಗ ಅಸಲಿ ವಿಷಯವೇ ಬೇರೆ ಇರುತ್ತದೆ ಎಂದು ಹೇಳಿದರು.

ಮನೋಭಾವ ಬದಲು: ಯುವಜನರ ಅಂತರ್ಜಾಲ ಆಸಕ್ತಿ ಸೈಬರ್ ಅಪರಾಧಿಗಳಿಗೆ ನೆರವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕ್ರಿಯಾಶೀಲವಾದರೆ ವ್ಯಕ್ತಿತ್ವವೇ ನಿಧಾನವಾಗಿ ಬದಲಾಗುತ್ತದೆ. ಮನೋಭಾವದ ಬಲಾತ್ಕಾರಕ್ಕೆ ಎಲ್ಲರೂ ಒಳಗಾಗುತ್ತಿದ್ದೇವೆ. ಕೃತಕ ಬುದ್ಧಿವಂತಿಕೆಯಿಂದ ನಮ್ಮ ಡೇಟಾಗಳನ್ನು ವಿಂಗಡಿಸಿ, ವಿಶ್ಲೇಷಿಸಿ, ವಿಮರ್ಶಿಸುವ ರೋಬೋಟ್‌ಗಳು ನಮ್ಮ ಅಭ್ಯಾಸ, ಹವ್ಯಾಸ, ಖರೀದಿಯನ್ನು ನಿಯಂತ್ರಿಸುವ ಅಪಾಯಕ್ಕೆ ಸಿಲುಕಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಐಐಎಸ್‌ಎಸ್‌ಎಂ ಅಧ್ಯಕ್ಷ ಎಸ್.ಕೆ.ಶರ್ಮ, ಮಹಾ ನಿರ್ದೇಶಕ ರಾಜನ್ ಮೆಡ್ಕರ್, ಕೆಎಸ್‌ಎಸ್‌ಎ ಅಧ್ಯಕ್ಷ ಎಂ.ಸಿ.ಪ್ರಕಾಶ್, ಐಐಎಸ್ ಎಸ್‌ಎಂ ಬೆಂಗಳೂರು ಅಧ್ಯಕ್ಷ ಬಿ.ಎಂ.ಶಶಿಧರ್, ಎಸ್‌ಐಎಸ್‌ಸಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕಿಶೋರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News