ಬಿಬಿಎಂಪಿ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಆರೋಪ: ಭೂ ಹಗರಣ ಸಿಐಡಿ ತನಿಖೆಗೆ ವಹಿಸಲು ಒತ್ತಾಯ

Update: 2019-11-14 16:06 GMT

ಬೆಂಗಳೂರು, ನ. 14: ಬಿಬಿಎಂಪಿ ಆಸ್ತಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ 300 ಕೋಟಿ ರೂ. ಮೌಲ್ಯದ ಬೃಹತ್ ಭೂ ಹಗರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 300 ಕೋಟಿ ರೂ.ಗೂ ಹೆಚ್ಚು ಬೆಲೆಬಾಳುವ ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿಯ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂಬರ್ 125 ಮತ್ತು 126 ಸರಕಾರಿ ಸೊತ್ತು ಇದಾಗಿದ್ದು, ಗಣೇಶ ಮಂದಿರ ವಾರ್ಡ್‌ನ ವ್ಯಾಪ್ತಿಯ ಬನಗಿರಿ ನಗರದಲ್ಲಿರುವ 4.31 ಎಕರೆ ವಿಸ್ತ್ರೀರ್ಣದ ಎರಡು ಉದ್ಯಾನವನಗಳಿಗೆ ಸಂಬಂಧಿಸಿದಂತೆ 62 ಮಂದಿ ನೆಲಗಳ್ಳರು ನಕಲಿ ಪತ್ರ ಸೃಷ್ಟಿಸಿ ಜಮೀನು ಕಬಳಿಸುವ ಪ್ರಯತ್ನ ನಡೆಸಿದ್ದಾರೆ. ಈ ನೆಲಗಳ್ಳರ ಹೆಸರುಗಳಿಗೆ ಖಾತಾ ಮಾಡಿಕೊಟ್ಟಿರುವ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಧಾನಸಭೆಯ ಉಪಸಭಾಪತಿ ಕೃಷ್ಣರೆಡ್ಡಿಯವರು ಪಾಲಿಕೆ ಸೊತ್ತಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವ ನೆಲಗಳ್ಳರ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂದಕ್ಕೆ ತೆಗೆದು ಆಸ್ತಿಯನ್ನು ಅವರಿಗೆ ಬಿಟ್ಟುಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆಪಾದಿಸಿದರು. ಭವಾನಿ ಹೌಸಿಂಗ್ ಸೊಸೈಟಿಗೆ ಕತ್ರಿಗುಪ್ಪೆಯ ಸರ್ವೆ ನಂ. 125 ಮತ್ತು 126ರ 20 ಎಕರೆಯ ಪೈಕಿ 4.31ನ್ನು ಎಕರೆ ಉಳಿಸಿಕೊಂಡು ಬಿಡಿಎ ಉಳಿದ ಭೂಮಿಯನ್ನು ಸೊಸೈಟಿಗೆ ಮಂಜೂರು ಮಾಡಿದೆ. 2002ರಲ್ಲಿ ಬಿಡಿಎ ಸಂಸ್ಥೆಯು ಬಿಬಿಎಂಪಿಗೆ ಹಸ್ತಾಂತರ ಮಾಡಿತ್ತು. ಆದರೆ, ಈ ನೆಲದ ಮೇಲೆ ಕಣ್ಣಿಟ್ಟಿದ್ದ ನೆಲಗಳ್ಳರ ಹೆಸರಿಗೆ ಬನಶಂಕರಿ ಉಪವಿಭಾಗದ ಅಧಿಕಾರಿಗಳು ಕಾನೂನು ಬಾಹಿರವಾಗಿ ಖಾತಾ ಮಾಡಿಕೊಟ್ಟಿದ್ದರು ಎಂದು ಆರೋಪಿಸಿದರು.

ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಭಯಗೊಂಡ ಸರಕಾರಿ ನೆಲಗಳ್ಳರು ವಿಧಾನಸಭೆಯ ಅರ್ಜಿಗಳ ಸಮಿತಿಗೆ ಮೇಲ್ಮನವಿ ಸಲ್ಲಿಸಿದರು. ಆಗ ಅಧ್ಯಕ್ಷರಾಗಿದ್ದ ಕೃಷ್ಣರೆಡ್ಡಿ ಅವರು ಈ ಸರಕಾರಿ ಸೊತ್ತನ್ನು 62 ಮಂದಿಗೆ ತಕ್ಷಣವೇ ಒಪ್ಪಿಸಬೇಕೆಂದು ದಕ್ಷಿಣ ವಲಯದ ಜಂಟಿ ಆಯುಕ್ತರು ಯೋಜನೆ, ದಕ್ಷಿಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಿದರು. ಈ ಬೃಹತ್ ಹಗರಣದಲ್ಲಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು 3 ಸಾವಿರ ಚದರ ವಿಸ್ತ್ರೀರ್ಣಕ್ಕೆ ಕಾನೂನು ಬಾಹಿರವಾಗಿ ಬೇಲಿ ಹಾಕಿಕೊಂಡಿದ್ದಾರೆ. ದಿ. ನಟಿ ಸೌಂದರ್ಯ ಅವರಿಗೆ ಹಂಚಿಕೆಯಾಗಿದ್ದ. 68*40 ಅಳತೆಯ ಜಿ. ಕ್ಯಾಟಗರಿಗೆ ನಿವೇಶನಕ್ಕೂ ಭವಾನಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರಿಗೆ ಮಾರಾಟ ಮಾಡಿದೆ ಎಂದು ದೂರಿದರು.

ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥರು ಮತ್ತು ಆಸ್ತಿಗಳ ವಿಭಾಗದ ವಿಶೇಷ ಆಯುಕ್ತರು ಖುದ್ದಾಗಿ ವಿಧಾನಸಭೆಯ ಅರ್ಜಿಗಳ ಸಮಿತಿಯ ಮುಂದೆ ಹಾಜರಾಗಿ ಸರಕಾರಿ ಸ್ವತ್ತಿನ ಬಗ್ಗೆ ಸಮಿತಿಯ ಸದಸ್ಯರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಬಿಬಿಎಂಪಿ ಆಯುಕ್ತರನ್ನು ಒತ್ತಾಯಿಸಿದರು. ಈ ಭೂ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭವಾನಿ ಗೃಹ ನಿರ್ಮಾಣ ಸಹಕಾರ ಸಂಘದ ಮುಖ್ಯಸ್ಥರು ಪಾಲಿಕೆ ಕಂದಾಯ ಅಧಿಕಾರಿಗಳು 62 ಮಂದಿ ನೆಲಗಳ್ಳರ ವಿರುದ್ಧ ಎಸಿಬಿ ಮತ್ತು ಬಿಎಂಟಿಎಫ್ ದೂರು ಸಲ್ಲಿಸುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News