ಬೆಂಗಳೂರು ನಗರದಾದ್ಯಂತ 980 ಅಕ್ರಮ ಕಟ್ಟಡಗಳು !

Update: 2019-11-14 17:57 GMT

ಬೆಂಗಳೂರು, ನ.14: ನಗರದಾದ್ಯಂತ ನಿಯಮ ಉಲ್ಲಂಘನೆ ಮಾಡಿರುವ 980 ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿದ್ದು, ಕ್ರಮ ಕೈಗೊಳ್ಳಲು ಮುಂದಾಗಿದೆ. 

ನಗರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ 178 ಕಟ್ಟಡಗಳನ್ನು ಪತ್ತೆ ಹಚ್ಚಿದ್ದ ಬಿಬಿಎಂಪಿ, ಈಗ ನಿಯಮ ಬಾಹಿರವಾಗಿ ನಿರ್ಮಾಣ ಮಾಡುತ್ತಿರುವ ಅಕ್ರಮ ಕಟ್ಟಡಗಳನ್ನು ಪತ್ತೆ ಹಚ್ಚಲಾಗಿದೆ. ನಗರದ ಎಂಟು ವಲಯ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲಿ ನಕ್ಷೆ ಉಲ್ಲಂಘನೆ ಮಾಡಿಕಟ್ಟಡ ನಿರ್ಮಿಸಿರುವುದು, ನಕ್ಷೆಯನ್ನೇ ಪಡೆಯದೇ ನಿರ್ಮಾಣ ಮಾಡಿರುವ ಕಟ್ಟಡಗಳೂ ಇದರಲ್ಲಿವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ವಲಯವೇ ಅಧಿಕ: ಪಾಲಿಕೆ ವ್ಯಾಪ್ತಿಯಲ್ಲಿ ದಕ್ಷಿಣ ವಲಯದಲ್ಲಿಯೇ ಅಧಿಕವಾಗಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡಗಳ ನಿರ್ಮಾಣ ಮಾಡಿರುವುದು ವರದಿಯಾಗಿದೆ. ಉಳಿದ ವಲಯಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ವಲಯದಲ್ಲಿ 274 ಅಕ್ರಮ ಕಟ್ಟಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭಾಗದಲ್ಲಿ ಹೆಚ್ಚು ವಸತಿ ಸಮುಚ್ಛಯಗಳು ನಿರ್ಮಾಣ ಹಂತದಲ್ಲಿದ್ದು, ಬಿಬಿಎಂಪಿಯ ಅಧಿಕಾರಿಗಳು ಗುರುತಿಸಿರುವ ಅನಧಿಕೃತ ಕಟ್ಟಡಗಳ ಪಟ್ಟಿಯಲ್ಲಿ ವಸತಿ ಸಮುಚ್ಛಯಗಳು ಎಷ್ಟಿವೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.

ನಗರದಲ್ಲಿ ಒಟ್ಟಾರೆ 980 ಕಟ್ಟಡಗಳು ನಿಯಮ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಲ್ಲಿ ಯಾವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪರಿಶೀಲನೆ ಮಾಡಿ, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News