‘ದೇಶದ ಏಳು ಸಾವಿರ ಸರಕಾರಿ ಶಾಲೆಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ’

Update: 2019-11-14 18:03 GMT

ಬೆಂಗಳೂರು, ನ.14: ಜಗತ್ತಿನ ಮೊದಲ ಮಕ್ಕಳ ಚಲನಚಿತ್ರೋತ್ಸವ ಎಂದೇ ಖ್ಯಾತವಾಗಿರುವ ಡೆಲ್ ಇಂಟರ್‌ನ್ಯಾಷನಲ್ ಕಿಡ್ಸ್ ಫಿಲ್ಮ್ ಫೆಸ್ಟಿವಲ್ ವಿಶ್ವದಾದ್ಯಂತ ಶಾಲೆಗಳಲ್ಲಿ 2019ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯುತ್ತದೆ. ಈ ಬಾರಿ ನಡೆಯುತ್ತಿರುವ ಫಿಲ್ಮ್ ಫೆಸ್ಟಿವಲ್ 3ನೇ ಸರಣಿಯದ್ದಾಗಿದೆ.

ಈ ಬಾರಿಯ ಉದ್ದೇಶವೆಂದರೆ ಮಕ್ಕಳನ್ನು ಈ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರಿಗೆ ಚಲನಚಿತ್ರಗಳ ಬಗ್ಗೆ ಶಿಕ್ಷಣ ನೀಡುವುದಾಗಿದೆ. ಡೆಲ್-ಐಕೆಎಫ್‌ಎಫ್ ಈ ಬಾರಿ ಕರ್ನಾಟಕ, ತೆಲಂಗಾಣ ಮತ್ತು ಅಸ್ಸಾಂ ರಾಜ್ಯ ಸರಕಾರಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಇದರ ಮೂಲಕ ಸ್ಥಳೀಯ ಸರಕಾರಿ ಶಾಲೆಗಳಿಗೆ ಜಾಗತಿಕ ಮಟ್ಟದ ಫಿಲ್ಮ್ ಫೆಸ್ಟಿವಲ್‌ನ ಅನುಭವ ನೀಡಲಾಗುತ್ತಿದೆ. ಈ ಫೆಸ್ಟಿವಲ್‌ನಲ್ಲಿ ಏಳು ಸಾವಿರಕ್ಕೂ ಅಧಿಕ ಶಾಲೆಗಳು ಪಾಲ್ಗೊಳ್ಳುತ್ತಿದ್ದು, ಈ ಮೂಲಕ ಭಾರತದಲ್ಲಿನ ಸರಕಾರಿ ಶಾಲೆಗಳ ಮಕ್ಕಳ ಜೀವನಸ್ಪರ್ಶಿ ಫೆಸ್ಟಿವಲ್ ಇದಾಗಲಿದೆ. 

ರಾಜಾಜಿನಗರದಲ್ಲಿನ ಕೆಎಲ್‌ಇ ಸೊಸೈಟಿಯ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮತ್ತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಈ ಫೆಸ್ಟಿವಲ್ ಅನ್ನು ಉದ್ಘಾಟಿಸಿದರು.

ಡೆಲ್ ಇಂಟರ್‌ನ್ಯಾಷನಲ್ ಕಿಡ್ಸ್ ಫಿಲ್ಮ್ ಫೆಸ್ಟಿವಲ್ ವಿದ್ಯಾರ್ಥಿಗಳಿಗೆ ಕೇವಲ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವಾದ ಮಕ್ಕಳ ಚಿತ್ರ ನೋಡುವುದಷ್ಟೇ ಅಲ್ಲ, ಚಲನಚಿತ್ರ ನಿರ್ಮಾಣ ಮತ್ತು ಚಲನಚಿತ್ರ ನಿರ್ಮಾಣದ ಕುರಿತು ಏರ್ಪಡಿಸುವ ಸ್ಪರ್ಧೆಯಲ್ಲಿಯೂ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ. ಡೆಲ್-ಐಕೆಎಫ್‌ಎಫ್ 2019 ಜಗತ್ತಿನ ಅತ್ಯಂತ ದೊಡ್ಡ ಮಕ್ಕಳ ಚಲನಚಿತ್ರೋತ್ಸವವಾಗಿದೆ. 40ಕ್ಕೂ ಅಧಿಕ ದೇಶಗಳಲ್ಲಿ ಇದನ್ನು ಆಯೋಜಿಸಲಾಗುತ್ತಿದ್ದು, 2 ದಶಲಕ್ಷಕ್ಕೂ ಅಧಿಕ ಶಾಲಾ ಮಕ್ಕಳು ಮತ್ತು ಅವರ ಕುಟುಂಬ ವರ್ಗದವರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನವೆಂಬರ್‌ನಲ್ಲಿ ಆರಂಭವಾಗಲಿರುವ ಈ ಫಿಲ್ಮ್ ಫೆಸ್ಟಿವಲ್ 2 ತಿಂಗಳ ಕಾಲ ನಡೆಯಲಿದೆ.

ಕಾರ್ಯಕ್ರಮದಲ್ಲಿ ಎಲ್‌ಎಕ್ಸ್‌ಎಲ್‌ನ ಚೀಫ್ ಲರ್ನರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸೈಯದ್‌ ಸುಲ್ತಾನ್, ಡೆಲ್ ಟೆಕ್ನಾಲಜಿಸ್ ಇಂಡಿಯಾದ ಸಿಎಸ್‌ಬಿ ಮಾರ್ಕೆಟಿಂಗ್‌ನ ನಿರ್ದೇಶಕರಾದ ರಿತು ಗುಪ್ತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News