ಬೆಂಗಳೂರು: ಮೈದಾನಕ್ಕಾಗಿ ನಡೆಯುತ್ತಿರುವ ಹೋರಾಟ 181ನೇ ದಿನಕ್ಕೆ

Update: 2019-11-14 18:08 GMT

ಬೆಂಗಳೂರು, ನ.14: ಇಲ್ಲಿನ ರಾಮಕೃಷ್ಣ ನಗರ ಆಟದ ಮೈದಾನವನ್ನು ಖಾಸಗಿ ಸಂಸ್ಥೆಗಳಿಗೆ ನೀಡದೆ, ಆಟದ ಮೈದಾನವಾಗಿಯೇ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ 181ದಿನಕ್ಕೆ ಕಾಲಿಟ್ಟಿದ್ದು, ಇಂದು ಮಕ್ಕಳ ದಿನಾಚರಣೆಯನ್ನು ಮೈದಾನದಲ್ಲಿಯೇ ಆಚರಿಸುವ ಮೂಲಕ ಹೋರಾಟವನ್ನು ಮುಂದುವರೆಸಲಾಗಿದೆ.

ಹತ್ತಾರು ವರ್ಷಗಳಿಂದ ರಾಮಕೃಷ್ಣ ಆಟದ ಮೈದಾನದಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಆಟ ಆಡುತ್ತಿದ್ದರು. ಹಿರಿಯ ನಾಗರಿಕರು ವಾಯುವಿಹಾರ ನಡೆಸುತ್ತಿದ್ದರು. ಮೈದಾನದ ಸುತ್ತಮುತ್ತ ಹತ್ತಾರು ಶಾಲೆಗಳಿವೆ. ಈ ವಿದ್ಯಾರ್ಥಿಗಳಿಗೆ ಇರುವುದು ಇದೊಂದು ಆಟದ ಮೈದಾನ. ಆದರೆ, ಬಿಡಿಎ ಈ ಮೈದಾನವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಮೂಲಕ ಕಾನೂನು ಬಾಹಿರ ಕೃತ್ಯ ಎಸಗಿದೆ.

ಈಗಾಗಲೇ ಆಟದ ಮೈದಾನವನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸಚಿವ ಲಲಿತಾ ನಾಯಕ್, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ರವಿಕೃಷ್ಣಾ ರೆಡ್ಡಿ, ನಟ ಚೇತನ್ ಸೇರಿದಂತೆ ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ. ಆದಾವುದಕ್ಕೂ ಬಿಡಿಎ ಸೂಕ್ತವಾಗಿ ಸ್ಪಂದಿಸದೆ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ. ಬಿಬಿಎಂಪಿ ಕಡತಗಳಲ್ಲೂ ಇದು ಆಟದ ಮೈದಾನವೆಂದೇ ನಮೂದಾಗಿದೆ. ಆದರೂ, ಅಧಿಕಾರಿಗಳು, ರಾಜ್ಯ ಸರಕಾರ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಕಳೆದ 181 ದಿನದಿಂದ ವಿದ್ಯಾರ್ಥಿಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆಟದ ಮೈದಾನ ಸಿಗದ ಹೋರಾಟ ನಿಲ್ಲವುದಿಲ್ಲ. ಹೀಗಾಗಿ ಸರಕಾರ ಮಕ್ಕಳ ಹಿತಾಸಕ್ತಿಗೆ ಪೂರಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರ ಜ್ಞಾನಮೂರ್ತಿ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News