ಡಿಕೆ ಶಿವಕುಮಾರ್ ಜಾಮೀನು ಪ್ರಶ್ನಿಸಿ ಈಡಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್

Update: 2019-11-15 15:59 GMT

ಹೊಸದಿಲ್ಲಿ, ನ.15: ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ದಿಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ, ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಈಡಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಹಾಗೂ ಎಸ್.ರವೀಂದ್ರ ಭಟ್ ಅವರಿದ್ದ ಪೀಠ, ಈಡಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪ್ರಕರಣದ ವಾದವನ್ನೇ ಸ್ವಲ್ವವೂ ಬದಲಾವಣೆ ಮಾಡದೇ ಯಥಾವತ್ತಾಗಿ ಇಲ್ಲಿ ನೀಡಿದ್ದೀರಿ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಈ.ಡಿ. ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಕೇಂದ್ರ ಗೃಹ ಸಚಿವ, ಮಾಜಿ ಕೇಂದ್ರ ಹಣಕಾಸು ಸಚಿವ ಎಂದು ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ.

ಇದರಿಂದ ಕೆಂಡಾಮಂಡಲವಾದ ನ್ಯಾಯಮೂರ್ತಿಗಳು, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ವಿರುದ್ಧದ ಪ್ರಕರಣದ ಅಂಶಗಳನ್ನೇ ಈ ಅರ್ಜಿಯಲ್ಲಿ ನಮೂದಿಸಿಕೊಂಡು ಬಂದಿದ್ದೀರಾ? ಎಂದು ಈ.ಡಿ.ಅಧಿಕಾರಿಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.

ಈಡಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಕರಣದ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನದಟ್ಟು ಮಾಡಲು ಪ್ರಯತ್ನಿಸಿತು. ಆದರೆ, ಸುಪ್ರೀಂಕೋರ್ಟ್ ಅವರ ವಾದವನ್ನು ಅಲ್ಲಗಳೆದಿತು.

ಇದೇ ವೇಳೆ ಡಿ.ಕೆ.ಶಿವಕುಮಾರ್ ಪರ ವಕೀಲರು, ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯ್ದೆಯ 45ನೇ ಸೆಕ್ಷನ್ ಉಲ್ಲೇಖಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಈ.ಡಿ.ಅಧಿಕಾರಿಗಳು ನಾಗರಿಕರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ತಿಳಿಸಿದರು.

ಇದೇ ವೇಳೆ ಆದಾಯ ತೆರಿಗೆ ಇಲಾಖೆಯು ತಮ್ಮ ಮೇಲೆ ಮಾಡಿರುವ ಆರೋಪಗಳನ್ನು ವಜಾಗೊಳಿಸಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಆದಾಯ ತೆರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.

ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ. ನನ್ನ ಪರ ಹಲವರು ಪ್ರಾರ್ಥನೆ ಮಾಡಿದ್ದರು. ಜನರ ನಂಬಿಕೆ, ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಈಡಿ ಯವರು ಅನೇಕ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದರೂ, ನ್ಯಾಯಾಲಯ ನಮ್ಮ ಮನವಿಗೆ ಮನ್ನಣೆ ನೀಡಿದೆ. ರಾಜ್ಯದ ಜನತೆ ನನ್ನ ಪರ ಹೋರಾಟ ಮಾಡಿದ್ದಾರೆ. ಅದರ ಫಲವಾಗಿ ನಮಗೆ ನ್ಯಾಯ ಸಿಕ್ಕಿದೆ. ಕಾನೂನಿನ ಚೌಕಟ್ಟಿನಲ್ಲಿ ನಾವು ನ್ಯಾಯಬದ್ಧವಾದ ವ್ಯವಹಾರ ಮಾಡಿದ್ದೇವೆ. ಉಪಚುನಾವಣೆಯಲ್ಲಿ ಪಕ್ಷ ಹೇಳಿದ ಕೆಲಸ ಮಾಡುತ್ತೇನೆ.

-ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News