ಭೋಪಾಲ್ ಅನಿಲ ದುರಂತ ಸಂತ್ರಸ್ತರ ಆಶಾಕಿರಣ ಅಬ್ದುಲ್ ಜಬ್ಬಾರ್ ನಿಧನ

Update: 2019-11-15 06:39 GMT
ಫೋಟೊ ಕೃಪೆ: facebook.com/jabbar.bhopal

ಭೋಪಾಲ್, ನ. 15: 1984 ರ ಭೋಪಾಲ್ ಅನಿಲ ದುರಂತದ ಸಾವಿರಾರು ಸಂತ್ರಸ್ತರಿಗೆ ನ್ಯಾಯ ಹಾಗು ಪರಿಹಾರ ಒದಗಿಸಲು ನಿಸ್ವಾರ್ಥವಾಗಿ ದಶಕಗಳಿಂದ ದುಡಿಯುತ್ತಿದ್ದ  ಖ್ಯಾತ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಜಬ್ಬಾರ್ ಗುರುವಾರ ನಿಧನರಾಗಿದ್ದಾರೆ. 

ವಿಶ್ವದ ಅತ್ಯಂತ ಭಯಾನಕ ಕೈಗಾರಿಕಾ ದುರಂತ ಎಂದು ಇಂದಿಗೂ ದಾಖಲಾಗಿರುವ ಭೋಪಾಲ್ ಅನಿಲ ದುರಂತದಲ್ಲಿ ಜಬ್ಬಾರ್ ಅವರು ತಮ್ಮ ತಂದೆ, ತಾಯಿ ಹಾಗು ಸೋದರನನ್ನು ಕಳಕೊಂಡಿದ್ದರು. ಅವರೂ ಶ್ವಾಸಕೋಶದ ಸೋಂಕಿಗೆ ಗುರಿಯಾಗಿ, ಅರ್ಧದಷ್ಟು ದೃಷ್ಟಿಯನ್ನೂ ಕಳಕೊಂಡಿದ್ದರು. ಆದರೆ ಜನರಿಗಾಗಿ ಹೋರಾಟವನ್ನು ತನ್ನ ಕೊನೆವರೆಗೂ ಮುಂದುವರೆಸಿದ್ದು ಅವರ ವಿಶೇಷ. ಎಲ್ಲವನ್ನೂ ಕಳಕೊಂಡ ಭೋಪಾಲ್ ದುರಂತ ಸಂತ್ರಸ್ತರಲ್ಲಿ ಭರವಸೆ ಮೂಡಿಸಿ, ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ಹಾಗು ಸೂಕ್ತ ಪರಿಹಾರ ಪಡೆಯಲು ಅವರಲ್ಲಿ ಹೋರಾಟದ ಕಿಚ್ಚು ಹಚ್ಚಿದ ಕೀರ್ತಿ ಅಬ್ದುಲ್ ಜಬ್ಬಾರ್ ಅವರಿಗೆ ಸಲ್ಲುತ್ತದೆ. 

1987 ರಲ್ಲಿ ಅವರು ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಉದ್ಯೋಗ್ ಸಂಘಟನ್ ಎಂಬ ಸಂಘಟನೆ ಸ್ಥಾಪಿಸಿ ದುರಂತ ಸಂತ್ರಸ್ತರಿಗಾಗಿ ದುಡಿಯಲು ಪ್ರಾರಂಭಿಸಿದರು. ಧರಣಿ, ಪ್ರತಿಭಟನೆ, ಕಾನೂನು ಹೋರಾಟಗಳ ಮೂಲಕ ನ್ಯಾಯ , ಪರಿಹಾರ  ಪಡೆಯಲು,ಸಂತ್ರಸ್ತರ ಮನೆಯವರಿಗೆ ಉದ್ಯೋಗ ಕೊಡಿಸಲು ಅವರು ಶ್ರಮಿಸುತ್ತಿದ್ದರು. 

ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಜಬ್ಬಾರ್ ಅವರಿಗೆ ಸರಕಾರದಿಂದಲೇ ಪೂರ್ಣ ಚಿಕಿತ್ಸೆ ಕೊಡಿಸುವುದಾಗಿ ಮಧ್ಯ ಪ್ರದೇಶ ಸರಕಾರ ಹೇಳಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆದುಕೊಂಡು ಹೋಗುವ ಮೊದಲೇ ಅವರು ಮೃತಪಟ್ಟಿದ್ದಾರೆ. 

ಭೋಪಾಲ್ ನಲ್ಲಿದ್ದ ಕ್ರಿಮಿನಾಶಕ ಕಾರ್ಖಾನೆ ಯೂನಿಯನ್ ಕಾರ್ಬೈಡ್ ನಲ್ಲಿ ವಿಷಾನಿಲ ಸೋರಿಕೆಯಾಗಿ 1984 ರಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಹಲವು ವರ್ಷಗಳ ವರೆಗೆ ಅದರ ಪರಿಣಾಮದಿಂದಾಗಿ ದೊಡ್ಡ ಸಂಖ್ಯೆಯ ಜನರು ಅನಾರೋಗ್ಯ ಪೀಡಿತರಾಗಿರುತ್ತಿದ್ದರು. 

ದುರಂತದ ಬೆನ್ನಿಗೆ ದೇಶದಿಂದ ಪರಾರಿಯಾದ ಕಂಪೆನಿಯ ಸಿಇಒ ವಾರನ್ ಆಂಡರ್ಸನ್ ಅವರು ಭಾರತದ ನ್ಯಾಯಾಲಯಕ್ಕೆ ಹಾಜರಾಗಲೇ ಇಲ್ಲ. 2013 ರಲ್ಲಿ ಅವರು ಅಮೇರಿಕಾದಲ್ಲಿ ನಿಧನರಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News