ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯ ಬೆಂಗಳೂರು, ದಿಲ್ಲಿ ಕಚೇರಿಗಳ ಮೇಲೆ ಸಿಬಿಐ ದಾಳಿ

Update: 2019-11-15 15:38 GMT

ಬೆಂಗಳೂರು, ನ.15: ಮಾನವ ಹಕ್ಕುಗಳ ಹೋರಾಟದಲ್ಲಿ ಸಕ್ರಿಯವಾಗಿರುವ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಸಂಸ್ಥೆಯ ಬೆಂಗಳೂರು ಹಾಗೂ ದಿಲ್ಲಿ ಕಚೇರಿಗಳ ಮೇಲೆ ಮೇಲೆ ಸಿಬಿಐ ಶುಕ್ರವಾರ ದಿಢೀರ್ ದಾಳಿ ನಡೆಸಿದೆ.

ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯಿದೆ(ಎಫ್‌ಸಿಆರ್‌ಎ) ಉಲ್ಲಂಘನೆ ಆರೋಪ ಬೆಳಕಿಗೆ ಬಂದ ಹಿನ್ನೆಲೆ ಬೆಂಗಳೂರು ಹಾಗೂ ದಿಲ್ಲಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಸಂಸ್ಥೆ ಪ್ರಧಾನ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎನ್ನುವ ದೂರುಗಳಿದ್ದು, ಈ ಸಂಸ್ಥೆಗೆ ಅಕ್ರಮವಾಗಿ ವಿದೇಶದಿಂದ ಹಣ ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅಮ್ನೆಸ್ಟಿ ಸಂಸ್ಥೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಇಂದಿರಾನಗರದಲ್ಲಿರುವ ನಾಲ್ಕು ಅಂತಸ್ತಿನ ಕಚೇರಿ ಮೇಲಿನ ದಾಳಿ ವೇಳೆ ಸಂಸ್ಥೆಯ ಕೆಲ ವ್ಯಕ್ತಿಗಳ ಮಾಹಿತಿ, ಲ್ಯಾಪ್‌ಟಾಪ್‌ ಗಳನ್ನು ಸಿಬಿಐ ಜಪ್ತಿ ಮಾಡಿದೆ ಎನ್ನಲಾಗಿದೆ.

ಈಡಿ ದಾಳಿ: ಬ್ಯಾಂಕ್ ಅವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ದ ಜಾರಿ ನಿರ್ದೇಶನಾಲಯ (ಈಡಿ) 2018ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆ ಮೇಲೆ ದಾಳಿ ನಡೆಸಿ ಸಂಸ್ಥೆಯ ಕೆಲ ಬ್ಯಾಂಕ್ ಖಾತೆಗಳ ಮೇಲೆ ನಿರ್ಬಂಧ ಹೇರಿತ್ತು. ಅಲ್ಲದೆ ಈ ಸಂಸ್ಥೆಯ ವಿದೇಶಿ ವಿನಿಮಯದ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಈಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮ್ನೆಸ್ಟಿ ಹಿನ್ನೆಲೆ
ಮಾನವ ಹಕ್ಕುಗಳ ಪರವಾಗಿ ಗಟ್ಟಿಯಾಗಿ ಧ್ವನಿಗೂಡಿಸುವ ಸಂಸ್ಥೆಗಳ ಪೈಕಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆ ಪ್ರಮುಖವಾಗಿದ್ದು, ಸುಮಾರು 160 ದೇಶಗಳಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ, 70 ಲಕ್ಷಕ್ಕೂ ಹೆಚ್ಚಿನ ಸದಸ್ಯರಿದ್ದು, ಹಲವು ಸಂಘಟನೆಗಳು ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ.

ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಆ್ಯಮ್ನೆಸ್ಟಿ ಇಂಡಿಯಾ, ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತುತ್ತಿರುವ ಹಿನ್ನೆಲೆಯಲ್ಲಿ ನಮ್ಮನ್ನು ಗುರಿಯಾಗಿರಿಸಿ ದಾಳಿ ಮಾಡಲಾಗಿದೆ ಎಂದಿದೆ. ಆ್ಯಮ್ನೆಸ್ಟಿ ಇಂಡಿಯಾ, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧದ ನಿಲುವು ತೆಗೆದುಕೊಂಡಾಗ ಹಾಗೂ ಮಾತನಾಡಿದಾಗ ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಕಿರುಕುಳ ನಡೆಯುತ್ತಾ ಬಂದಿದೆ ಎಂದು ಆ್ಯಮ್ನೆಸ್ಟಿ ಆರೋಪಿಸಿದೆ.

ಆ್ಯಮ್ನೆಸ್ಟಿ ಇಂಡಿಯಾ ಭಾರತ ಹಾಗೂ ಅಂತಾರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ. ವಿಶ್ವದ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯಲು ನಾವು ಇತರ ದೇಶಗಳಂತೆ ಭಾರತದಲ್ಲಿ ಕೂಡಾ ಹೋರಾಡುತ್ತಿದ್ದೇವೆ. ಭಾರತೀಯ ಸಂವಿಧಾನದಲ್ಲಿ ಕೂಡ ಇದೇ ಮೌಲ್ಯಗಳನ್ನು ಹೇಳಲಾಗಿದೆ ಎಂದು ಅದು ಹೇಳಿದೆ.

'ಗೃಹ ಸಚಿವಾಲಯ ಅನುಮತಿ ನಿರಾಕರಿಸಿದ ಬಳಿಕ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯನ್ನು ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಇಂಡಿಯಾ ಗಾಳಿಗೆ ತೂರಿದೆ. ಅಲ್ಲದೆ ಲಾಭದ ಅಪೇಕ್ಷೆಯಿಲ್ಲದ್ದು ಎಂದು ಹೇಳಿಕೊಳ್ಳುವ ಈ ಸಂಸ್ಥೆ ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿ ವಾಣಿಜ್ಯ ಸಂಸ್ಥೆ ಸ್ಥಾಪಿಸಿ 36 ಕೋಟಿ ರೂಪಾಯಿ ವಿದೇಶಿ ದೇಣಿಗೆ ಸಂಗ್ರಹಿಸಿದೆ' ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News