ಮಾಹಿತಿ ಹಕ್ಕು ಸಂಸ್ಥೆಗೆ ಎದುರಾದ ಗಂಡಾಂತರ

Update: 2019-11-16 05:12 GMT

ಸರಕಾರಿ ಆಡಳಿತದಲ್ಲಿನ ಕಾರ್ಯ ಚಟುವಟಿಕೆಗಳು ಪಾರದರ್ಶಕವಾಗಿರಲಿ, ಹಾಗೂ ಪ್ರಜೆಗಳಿಗೆ ಎಲ್ಲದರ ಬಗ್ಗೆ ತಿಳಿದುಕೊಳ್ಳುವ ಹಕ್ಕಿರಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿರುವ ಮಾಹಿತಿ ಹಕ್ಕು ಕಾಯ್ದೆಗೆ ಈಗ ಅಪಾಯ ಎದುರಾಗಿದೆ. ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ 2005 ರಲ್ಲಿ ಜಾರಿಗೆ ತಂದಿದ್ದ ಮಾಹಿತಿ ಹಕ್ಕು ಕಾಯ್ದೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಗಂಡಾಂತರ ಎದುರಿಸುತ್ತಿದೆ. ಆದರೆ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಲೇ ಇದೆ. 2019ರಲ್ಲಿ ನರೇಂದ್ರ ಮೋದಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರವಂತೂ ಮಾಹಿತಿ ಹಕ್ಕು ಕಾಯ್ದೆಯನ್ನು ಸಂಪೂರ್ಣ ವಾಗಿ ಹೂತು ಹಾಕುವ ಮಸಲತ್ತು ನಡೆದಿದೆ. ಈ ಕಾಯ್ದೆಗೆ ಹಲವಾರು ತಿದ್ದುಪಡಿ ಗಳನ್ನು ತಂದು ಇದನ್ನು ಹಲ್ಲು ಕಿತ್ತ ಹಾವನ್ನಾಗಿ ಮಾಡುವ ಯತ್ನ ನಡೆದಿದೆ.

ಮಾಹಿತಿ ಹಕ್ಕು ಕಾಯ್ದೆಯಿಂದ ಈ ದೇಶದ ಹಲವಾರು ಭಾರೀ ಹಗರಣಗಳು ಬಯಲಿಗೆ ಬಂದಿವೆ. ಹಿಂದಿನ ಯುಪಿಎ ಸರಕಾರದಲ್ಲಿ ಟೆಲಿಕಾಂ ಹಗರಣ ಬಯಲಿಗೆ ಬಂದದ್ದೂ ಈ ಮಾಹಿತಿ ಹಕ್ಕು ಕಾನೂನಿನಿಂದ. ಆದರೂ ಮನಮೋಹನ್ ಸಿಂಗ್ ಸರಕಾರ ಇದನ್ನು ದುರ್ಬಲಗೊಳಿಸಲಿಲ್ಲ. ಆದರೆ ಬಿಜೆಪಿ ಸರಕಾರಕ್ಕೆ ಇದು ಬೇಡವಾಗಿದೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗದಂತೆ ನೋಡಿಕೊಂಡರು. ಈಗ ಕೇಂದ್ರದಲ್ಲಿ ಅದನ್ನೇ ಮಾಡುತ್ತಿದ್ದಾರೆ. ಕೆಲವು ಬಾರಿ ಈ ಮಾಹಿತಿ ಹಕ್ಕು ಕಾನೂನು ದುರುಪಯೋಗ ಆಗಿರಬಹುದು. ಆದರೆ ಇದರಿಂದ ಕೆಟ್ಟದಕ್ಕಿಂತ ಒಳ್ಳೆಯದೇ ಹೆಚ್ಚಿಗೆ ಆಗಿದೆ. ಸರಕಾರದ ಹಗರಣ ಬಯಲಿಗೆಳೆಯಲು ನೂರಾರು ಮಾನವ ಹಕ್ಕು ಕಾರ್ಯಕರ್ತರು ತಮ್ಮ ಪ್ರಾಣ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಅವರಲ್ಲಿ ಅನೇಕರು ಸಮಾಜ ವಿರೋಧಿ ಭ್ರಷ್ಟ ಶಕ್ತಿಗಳಿಂದ ಮಾರಣಾಂತಿಕ ದಾಳಿಗೊಳಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಇಂತಹ ಮಹತ್ವದ ಕಾನೂನನ್ನು ದುರ್ಬಲಗೊಳಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ವ್ಯವಸ್ಥಿತ ಯತ್ನ ನಡೆಸಿದೆ. ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದು ಮಾಹಿತಿ ಹಕ್ಕು ಆಯುಕ್ತರ ಅಧಿಕಾರಾವಧಿಯನ್ನು ಐದು ವರ್ಷಗಳಿಂದ ಮೂರು ವರ್ಷಗಳಿಗೆ ಕಡಿತಗೊಳಿಸುವ ತಿದ್ದುಪಡಿಯೊಂದು ಕಳೆದ ಜುಲೈನಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಜನಸಾಮಾನ್ಯರ ಜನತಾಂತ್ರಿಕ ಹಕ್ಕುಗಳನ್ನು ಒಂದೊಂದಾಗಿ ಅಪಹರಣ ಮಾಡಲು ಈ ಸರಕಾರ ಮುಂದಾಗಿದೆ.

ಮಾಹಿತಿ ಹಕ್ಕು ಕಾಯ್ದೆಯ 13, 16 ಮತ್ತು 27ನೇ ವಿಧಿಗಳಿಗೆ ತಂದಿರುವ ತಿದ್ದುಪಡಿ ಜಾರಿಯಾದರೆ, ಮಾಹಿತಿ ಆಯುಕ್ತರ ಅಧಿಕಾರ ವ್ಯಾಪ್ತಿ ದುರ್ಬಲ ವಾಗುತ್ತದೆ. ಕೇಂದ್ರದ ಹಾಗೂ ರಾಜ್ಯಗಳ ಮಾಹಿತಿ ಹಕ್ಕು ಆಯುಕ್ತರ ಅಧಿಕಾರ ವ್ಯಾಪ್ತಿ ಹಾಗೂ ಅಧಿಕಾರಾವಧಿ ಕಡಿತಗೊಳಿಸುವುದು ಮಾತ್ರವಲ್ಲ ಅವರ ವೇತನ ಶ್ರೇಣಿಗಳಲ್ಲಿ ಕಾಲಾನುಕಾಲಕ್ಕೆ ಬದಲಾವಣೆ ಮಾಡುವ ತಿದ್ದುಪಡಿಯನ್ನೂ ತರಲಾಗಿದೆ. ಈ ತಿದ್ದುಪಡಿಗಳು ಕಾನೂನಾಗಿ ಜಾರಿಗೆ ಬಂದರೆ ಮಾಹಿತಿ ಹಕ್ಕು ಆಯುಕ್ತರು ಸರಕಾರದ ಮುಲಾಜಿನಲ್ಲಿ ಹೆದರಿಕೊಂಡು ಕೆಲಸ ಮಾಡಬೇಕಾಗುತ್ತದೆ.ಇಷ್ಟೇ ಅಲ್ಲದೆ ಅನೇಕ ಕಡೆ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳು ತೆರವಾಗಿವೆ. ಅವುಗಳನ್ನು ಭರ್ತಿ ಮಾಡಲು ಕೇಂದ್ರ ಸರಕಾರಕ್ಕೆ ಆಸಕ್ತಿ ಇಲ್ಲ. ಹೀಗೆ ಆಯುಕ್ತರು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆಯಿಂದ ಮಾಹಿತಿ ಹಕ್ಕು ಸಂಸ್ಥೆಯನ್ನು ಕೇವಲ ಬೆದರು ಬೊಂಬೆಯನ್ನಾಗಿ ಮಾಡಿ ತನ್ನ ಭಾರೀ ಹಗರಣಗಳ ಮೇಲೆ ತಿಪ್ಪೆಸಾರಿಸಲು ಈ ಸರಕಾರ ಯತ್ನಿಸುತ್ತಿದೆ.

ದೇಶದಲ್ಲಿ ಈಗ ಒಂದು ವಿಧದ ಅಘೋಷಿತ ತುರ್ತು ಪರಿಸ್ಥಿತಿ ಹೇರಲ್ಪಟ್ಟಿದೆ.ಚುನಾವಣೆ ಮೂಲಕ ಗೆದ್ದು ಬಂದವರೇ ನಿರಂಕುಶ ಸರ್ವಾಧಿಕಾರಿಗಳಾಗಿ ಗೋಚರಿಸುತ್ತಿದ್ದಾರೆ. ಈ ತಾನಾಶಾಹಿ ಆಡಳಿತಕ್ಕೆ ಪ್ರತಿರೋಧವೇ ಇಲ್ಲದಂತಾಗಿದೆ. ಪ್ರತಿಪಕ್ಷಗಳು ಆಯಾಸಗೊಂಡು ತೇಕುತ್ತಿವೆ. ಇಂತಹ ಸನ್ನಿವೇಶವನ್ನು ಬಳಸಿಕೊಂಡು ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಮುಗಿಸುವ ಮಸಲತ್ತು ನಡೆದಿದೆ.

ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿರುವ ಈ ಸರಕಾರ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲೂ ಸುಪ್ರೀಂ ಕೋರ್ಟ್‌ನಿಂದ ಕ್ಲೀನ್‌ಚಿಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಾಹಿತಿ ಹಕ್ಕು ಸಂಸ್ಥೆಯಂತಹ ವ್ಯವಸ್ಥೆ ಸರಕಾರಕ್ಕೆ ಬೇಡವಾಗಿದೆ. ವೋಟು ಹಾಕಿ ಚುನಾಯಿಸಿದ ಜನ ಐದು ವರ್ಷಗಳ ಕಾಲ ಬಾಯಿ ಮುಚ್ಚಿ ತೆಪ್ಪಗಿರಬೇಕೆಂದು ಈ ಸರಕಾರ ಬಯಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಮಾಹಿತಿ ಹಕ್ಕು ಸಂಸ್ಥೆಯ ಅಗತ್ಯವಿಲ್ಲದಂತಹ ಆಡಳಿತವನ್ನು ನೀಡುವುದಾಗಿ ಹೇಳಿದರು. ಬಹುಶಃ ಆ ದಿಕ್ಕಿನಲ್ಲಿ ಹೊರಟಿರುವ ಸರಕಾರ ಮಾಹಿತಿ ಹಕ್ಕು ಸಂಸ್ಥೆಯ ರೆಕ್ಕೆ, ಪುಕ್ಕಗಳನ್ನು ಕತ್ತರಿಸಿ ತಾನಾಗಿ ಅದು ಸತ್ತು ಹೋಗುವಂತೆ ಮಾಡಲು ಎಲ್ಲ ಹುನ್ನಾರಗಳನ್ನೂ ನಡೆಸಿದೆ.

ಇಂತಹ ಗಂಭೀರ ಸನ್ನಿವೇಶದಲ್ಲಿ ಪ್ರತಿಪಕ್ಷಗಳು ಮಾತ್ರವಲ್ಲ, ನಾಗರಿಕ ಹಕ್ಕುಗಳ ಸಂಘಟನೆಗಳು ಜನಸಾಮಾನ್ಯರಿಗೆ ಇರುವ ಏಕೈಕ ಅಸ್ತ್ರವಾದ ಮಾಹಿತಿ ಹಕ್ಕು ಕಾಯ್ದೆಯನ್ನು ಹಾಗೂ ಸಂಸ್ಥೆಯನ್ನು ಉಳಿಸಿಕೊಳ್ಳಲು ದೃಢ ಸಂಕಲ್ಪವನ್ನು ಮಾಡಬೇಕಾಗಿದೆ. ಸಂಸತ್ತಿನ ಒಳಗೆ ಮಾತ್ರವಲ್ಲ ಸಂಸತ್ತಿನ ಹೊರಗೆ ಬೀದಿ, ಬೀದಿಗಳಲ್ಲಿ ಹೋರಾಟ ಮಾಡಲು ಪ್ರಜಾಪ್ರಭುತ್ವವಾದಿ ಸಂಘ, ಸಂಸ್ಥೆಗಳು ಮುಂದಾಗಬೇಕಾಗಿದೆ. ಈಗ ಸುಮ್ಮನಿದ್ದರೆ ಬರಲಿರುವ ದಿನಗಳು ಇನ್ನೂ ಭಯಾನಕವಾಗಲಿವೆ ಎಂಬುದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News