‘ಹಸಿವಿನ ಪರ’ ಮೋದಿ ಸಮರ ಸಾರಿದಂತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

Update: 2019-11-16 12:16 GMT

ಬೆಂಗಳೂರು, ನ.16: ನಮ್ಮ ಕಾಂಗ್ರೆಸ್ ಸರಕಾರ ಹಸಿವಿನ ವಿರುದ್ಧ ಸಮರ ಸಾರಿತ್ತು. ಸನ್ಮಾನ್ಯ ನರೇಂದ್ರ ಮೋದಿ ಅವರು, ‘ಹಸಿವಿನ ಪರ ಸಮರ’ ಸಾರಿದಂತಿದೆ ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಹಸಿವಿನ ಪರ ಸಮರ ಸಾರಿರುವುದಕ್ಕೆ ಈ ಪತ್ರಿಕಾ ವರದಿಗಳು ಸಾಕ್ಷಿ ಎಂದು ಆಂಗ್ಲ ಪತ್ರಿಕೆಗಳ ವರದಿಗಳನ್ನು ಟ್ಯಾಗ್ ಮಾಡಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕನಸಿನ ‘ಅಚ್ಚೆ ದಿನ್’: ‘ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಸವಿರುಚಿ ಸಂಚಾರಿ ಕ್ಯಾಂಟೀನ್ ಮೊದಲಾದ ನನ್ನ ಸರಕಾರದ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಪ್ರಯತ್ನ ನಡೆಸುತ್ತಿರುವ ಬಿಜೆಪಿ ಸರಕಾರ, ಕರ್ನಾಟಕವನ್ನು ನರೇಂದ್ರ ಮೋದಿ ಕನಸಿನ ‘ಅಚ್ಚೆ ದಿನ್’ ಕಡೆ ಕೊಂಡೊಯ್ಯಲು ನಿರ್ಧರಿಸಿದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಸಿವಿನ ದಿನಗಳಿಗೆ ಕೊಂಡೊಯ್ಯುತ್ತಿದ್ದಾರೆ: ‘ಗರೀಬಿ ಹಟಾವೋ’ ಘೋಷಣೆಯೊಂದಿಗೆ ಬಡತನದ ವಿರುದ್ದ ಸಮರ ಸಾರಿದ್ದ ಇಂದಿರಾ ಗಾಂಧಿಯವರನ್ನು ಟೀಕಿಸುತ್ತಿರುವ ಪ್ರಧಾನಿ ಮೋದಿ ಅವರು ‘ಅಚ್ಚೆ ದಿನ್’ ಹೆಸರಲ್ಲಿ ಭಾರತವನ್ನು ನಾಲ್ಕು ದಶಕಗಳ ಹಿಂದಿನ ಹಸಿವಿನ ದಿನಗಳಿಗೆ ಕೊಂಡೊಯ್ಯುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟ್ವೀಟ್ಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News