ಮೌಖಿಕ ಪರಂಪರೆಯ ಮೌಲ್ಯ ಹೆಚ್ಚಿಸಿದ ಅವಧೂತ ಕಿರಂ: ಹಿರಿಯ ಕವಿ ಸಿದ್ದಲಿಂಗಯ್ಯ

Update: 2019-11-16 12:27 GMT

ಬೆಂಗಳೂರು, ನ.16: ನಾಡಿನಲ್ಲಿ ಮೌಖಿಕ ಪರಂಪರೆ ಹಾಗೂ ಆಧುನಿಕ ಸಾಹಿತ್ಯಕ್ಕೆ ಕೊಂಡಿಯಾಗಿದ್ದ ಕಿರಂ.ನಾಗರಾಜ್, ಜನಪದ ನಾಯಕರಾದ ಮಂಟೇಸ್ವಾಮಿ, ಮಹದೇಶ್ವರ, ಜುಂಜಪ್ಪರಂತಹ ತತ್ವಪದಕಾರರ ಕಾವ್ಯಗಳನ್ನು ಲೋಕಕ್ಕೆ ಪರಿಚಯಿಸಿದ ಅವಧೂತರೆಂದು ಹಿರಿಯ ಕವಿ ಸಿದ್ದಲಿಂಗಯ್ಯ ಬಣ್ಣಿಸಿದರು.

ಶನವಾರ ಜನಸಂಸ್ಕೃತಿ ಪ್ರತಿಷ್ಠಾನ ಹಾಗೂ ಬೆಂಗಳೂರು ಆರ್ಟ್ ಫೌಂಡೇಷನ್ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಿರಂ-75’ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಿರಂ ಕುರಿತ ಪುಸ್ತಕ ಬಿಡುಗಡೆ, ಕಿರಂ ಪುರಸ್ಕಾರ ಹಾಗೂ ಅಹೋರಾತ್ರಿ ಕವನ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಾಹಿತ್ಯವನ್ನು ರಚಿಸಿಬಲ್ಲಂತಹ ಸಾಮರ್ಥ್ಯವಿದ್ದ ಕಿರಂ ನಾಗರಾಜ್ ಮೌಖಿಕ ಪರಂಪರೆಗೆ ಅಂಟಿಕೊಂಡರು. ಜನಪದರ ಹಾದಿಯಲ್ಲಿ ಸಾಗಿದ ಅವರು, ಜಗತ್ತಿನ ಪ್ರಾಚೀನ, ಆಧುನಿಕ ಕಾವ್ಯ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರದ ಜ್ಞಾನವನ್ನು ಮಾತಿನ ಮೂಲಕವೇ ಮತ್ತೊಬ್ಬರಿಗೆ ತಿಳಿಸುವುದರಲ್ಲಿಯೇ ತೃಪ್ತಿಪಟ್ಟರು ಎಂದು ಅವರು ಹೇಳಿದರು.

ವಿಚಾರವಾದವನ್ನು ಅತಿಯಾಗಿ ಅಪ್ಪಿದರೆ ನಷ್ಟವಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟ ಕಿರಂ ನಾಗರಾಜ್, ತತ್ವಪದಕಾರರು, ಅವಧೂತರು ಸೇರಿದಂತೆ ಜನಪದರ ಕಾವ್ಯಗಳಲ್ಲಿರುವ ಜನಪರ, ಪರಿಸರ ಹಾಗೂ ವೈಜ್ಞಾನಿಕತೆಯ ಸಾರವನ್ನು ನಮ್ಮೆಲ್ಲರಿಗೂ ಉಣ ಬಡಿಸಿದರು. ಅವರ ಪ್ರೇರಣೆಯಿಂದಾಗಿ ನಾಸ್ತಿಕನಾಗಿದ್ದ ನಾನು ಮಂಟೇಸ್ವಾಮಿ, ಮಹದೇಶ್ವರ, ಜುಂಜಪ್ಪರ ಕುರಿತು ಆಸಕ್ತಿ ಹಾಗೂ ಗೌರವವನ್ನು ಬೆಳೆಸಿಕೊಂಡೇ ಎಂದು ಅವರು ಹೇಳಿದರು.

ಕಿರಂ ನಾಗರಾಜ್ ಪಂಪ ಸಾಹಿತ್ಯದಿಂದ ಮೊದಲ್ಗೊಂಡು ಮಾರ್ಕ್ಸ್, ಲೆನಿನ್ ಚಿಂತನೆಯನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಅದೇ ಹೊತ್ತಿನಲ್ಲಿಯೇ ತೀರ ಸಾಮಾನ್ಯ ವಿಷಯಗಳ ಕುರಿತು ಗಹನವಾಗಿ ಚಿಂತಿಸುತ್ತಿದ್ದರು. ಹೀಗಾಗಿ ಅವರು ಎಲ್ಲರೊಂದಿಗೆ ಅತ್ಯಂತ ಆತ್ಮೀಯತೆಯಿಂದ ಬೆರೆಯಲು ಸಾಧ್ಯವಾಗುತ್ತಿತ್ತು ಎಂದು ಅವರು ಹೇಳಿದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಕಿರಂ ನಾಗರಾಜ್ ಯಾವ ಸಿದ್ಧಾಂತಗಳನ್ನೂ ಸರಾಸಗಟಾಗಿ ತಿರಸ್ಕರಿಸಿದವರಲ್ಲ. ಕುರುಡು ರೀತಿಯಲ್ಲಿ ಒಪ್ಪಿಕೊಂಡವರೂ ಅಲ್ಲ. ಬಲಪಂಥ, ಎಡಪಂಥದ ಎರಡೂ ವಿಚಾರ ಧಾರೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು ಎಂದರು.

ಪ್ರಪಂಪದ ಅನೇಕ ಕವಿಗಳನ್ನು ಓದಿಕೊಂಡಿದ್ದ ಅವರು, ಪಂಪ, ಕುಮಾರವ್ಯಾಸನ ಕಾವ್ಯವನ್ನು ಆಧುನಿಕ ಕವಿಗಳ ಸಾಹಿತ್ಯಕ್ಕೆ ಹೋಲಿಸಿ, ಸಾಮ್ಯತೆಯ ಕುರಿತು ಮಾತನಾಡಬಲ್ಲಷ್ಟು ಸಾಮರ್ಥ್ಯವಿದ್ದ ವಿದ್ವಾಂಸರಾಗಿದ್ದರು. ದಿನದ 24ಗಂಟೆ ಕಾಲವೂ ಸಾಹಿತ್ಯ ಧ್ಯಾನದಲ್ಲಿ ತೊಡಗಿದ್ದ ಏಕೈಕ ಉಪಾಧ್ಯಾಯರು ಎಂಬುದು ನನ್ನ ಬಲವಾದ ನಂಬಿಕೆಯೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶೂದ್ರ ಶ್ರೀನಿವಾಸ್‌ರ ‘ಕಿರಂ ಕಟ್ಟಿಕೊಟ್ಟ ಮನೋಲೋಕ’, ಡಾ.ಶಿವರಾಜ್ ಬ್ಯಾಡರಳ್ಳಿ ಅವರ ‘ನುಡಿಬೆಡಗು’, ಡಾ.ಜಯಶಂಕರ ಹಲಗೂರರ ‘ಕಿರಂ ಹೊಸ ಕವಿತೆಗಳು’ ಪುಸ್ತಕಗಳನ್ನು ಹಿರಿಯ ಸಾಹಿತಿ ನಲ್ಲೂರು ಪ್ರಸಾದ್ ಬಿಡುಗಡೆ ಮಾಡಿದರು. ಇದೇ ವೇಳೆ ಪ್ರಸಿದ್ಧ ಕಲಾವಿದ ಡಾ.ಎಂ.ಎಸ್.ಮೂರ್ತಿ ಕಿರಂ ವೆಬ್‌ಸೈಟ್‌ ಅನ್ನು ಬಿಡುಗಡೆ ಮಾಡಿದರು.

ಕಿರಂ ಪುರಸ್ಕಾರ: ಹಿರಿಯ ಸಾಧಕರಾದ ಮನು ಪಾಟೀಲ್, ನಾಗತಿಹಳ್ಳಿ ಚಂದ್ರಶೇಖರ್, ಪ್ರತಿಭಾ ನಂದಕುಮಾರ್, ಪ.ಸ.ಕುಮಾರ್, ಎಂ.ಆರ್.ಕಮಲ, ಉಷಾ ಕಟ್ಟೇಮನೆ, ಕಾಳೇಗೌಡ ನಾಗವಾರ, ಇಂಡಸ್ ಜಯರಾಂ, ಹರೀಶ್ ಕಟ್ಟೆಬೆಳಗುಲಿ ಸೇರಿದಂತೆ ಹಲವರಿಗೆ ಕಿರಂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಿರಂ ನಾಗರಾಜ್ ನಮಗೆ ಕಟ್ಟಿಕೊಟ್ಟ ಸಾಹಿತ್ಯ ಲೋಕ ಬಹು ಆಯಾಮವುಳ್ಳದ್ದು. ಅವರು ಕೇವಲ ಸಾಹಿತ್ಯದ ಕುರಿತು ಮಾತ್ರ ಓದಿಕೊಳ್ಳುತ್ತಿರಲಿಲ್ಲ, ಮಾತನಾಡುತ್ತಿರಲಿಲ್ಲ. ಪ್ರಸಿದ್ಧ ಸಂಗೀತಗಾರರ ಹಾಡುಗಳನ್ನು ಕೇಳಿಸುತ್ತಿದ್ದರು. ಕ್ರಿಕೆಟ್, ಕಬಡ್ಡಿ ಸೇರಿದಂತೆ ಎಲ್ಲ ಆಟಗಳನ್ನು ನೋಡಿಸುತ್ತಿದ್ದರು. ಹೀಗೆ ಎಲ್ಲ ಕ್ಷೇತ್ರಗಳ ಬಗೆಗೂ ಆಸಕ್ತಿ ತಾಳಿ, ಎಲ್ಲರನ್ನು, ಎಲ್ಲವನ್ನೂ ಅಪ್ಪಿಕೊಳ್ಳುತ್ತಿದ್ದರು.

-ಶೂದ್ರ ಶ್ರೀನಿವಾಸ್, ಹಿರಿಯ ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News