ಎನ್.ಆರ್.ರಮೇಶ್ ವಿರುದ್ಧ ಹಕ್ಕುಚ್ಯುತಿ ಮಂಡನೆ, ಮಾನನಷ್ಟ ಮೊಕದ್ದಮೆ: ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ

Update: 2019-11-16 12:30 GMT

ಬೆಂಗಳೂರು, ನ. 16: ಸರಕಾರಿ ಭೂಮಿ ಕಬಳಿಸಲು ಯತ್ನಿಸುತ್ತಿರುವ ಭೂಗಳ್ಳರಿಗೆ ನಾನು ಸಹಕಾರ ನೀಡುತ್ತಿದ್ದೇನೆಂದು ಆರೋಪ ಮಾಡಿದ ಬಿಜೆಪಿ ವಕ್ತಾರ ಎನ್. ಆರ್.ರಮೇಶ್ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವುದಲ್ಲದೆ, ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸುತ್ತೇನೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಎಚ್ಚರಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ಆರ್.ರಮೇಶ್, ನನ್ನ ವಿರುದ್ಧ ಮಾಡಿರುವ ಆರೋಪ ರಾಜಕೀಯ ಪ್ರೇರಿತವಾದುದ್ದು. ಆಧಾರರಹಿತ ಮತ್ತು ಕಪೋಲಕಲ್ಪಿತ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವೆ ಎಂದರು.

ಸಂವಿಧಾನಿಕ ಹುದ್ದೆಯಲ್ಲಿರುವವರ ಮೇಲೆ ಯಾವುದೇ ಆರೋಪ ಮಾಡುವ ವೇಳೆ ಜವಾಬ್ದಾರಿ ಇರಬೇಕು ಎಂದ ಕೃಷ್ಣಾರೆಡ್ಡಿ, ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ವಿಧಾನಸಭೆ ಅರ್ಜಿಗಳ ಸಮಿತಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಅರ್ಜಿ ವಿಷಯದ ಕುರಿತು ನಾನು ಯಾವುದೇ ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು.

ತಿಮ್ಮಪ್ಪ ಎಂಬುವರು ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಸದನದಲ್ಲಿ ಅದನ್ನು ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು. ಭವಾನಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಗೆ ಸರ್ವೆ ನಂ.125, 126ರ ಜಾಗದಲ್ಲಿ ಎರಡು ಪಾರ್ಕ್ ಅಭಿವೃದ್ಧಿಪಡಿಸಲು ಭೂಮಿ ಹಸ್ತಾಂತರಿಸಲಾಗಿದೆ. ಬಿಬಿಎಂಪಿ 3ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ. ಯಾವುದೇ ಸೊಸೈಟಿ ಆದರೂ ನಿಯಮ ಉಲ್ಲಂಘನೆ ಮಾಡುವಂತಿಲ್ಲ ಎಂದು ಸ್ಪಷ್ಟಣೆ ನೀಡಿದರು.

ನನ್ನನ್ನು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಸಲು ಸುಳ್ಳು ಆರೋಪ ಮಾಡುವ ಅಗತ್ಯವಿಲ್ಲ. ಅಂತಹ ಸಂದರ್ಭ ಬಂದರೆ ನಾನೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದ ಅವರು, ಇನ್ನು ಎರಡು ದಿನದಲ್ಲಿ ಎನ್.ಆರ್.ರಮೇಶ್ ನನ್ನ ವಿರುದ್ಧದ ಆರೋಪಕ್ಕೆ ಸೂಕ್ತ ದಾಖಲೆ ನೀಡದಿದ್ದರೆ ಮೊಕದ್ದಮೆ ದಾಖಲು ಮಾಡುವೆ ಎಂದು ಕಿಡಿಕಾರಿದರು.

‘ನನ್ನ ವಿರುದ್ಧ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮಾಡಿರುವ ಆರೋಪ ಆಧಾರರಹಿತ, ರಾಜಕೀಯ ಪ್ರೇರಿತ. ಬಾಯಿ ಚಪಲಕ್ಕೆ ಆರೋಪ ಮಾಡಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ನೀಡದಿದ್ದರೆ ಅವರೊಬ್ಬ ಮೂರ್ಖ, ಅಯೋಗ್ಯ, ಹುಚ್ಚ, ಅಜ್ಞಾನಿ ಎಂದು ಪರಿಗಣಿಸಬೇಕಾಗುತ್ತದೆ’

-ಎಂ.ಕೃಷ್ಣಾರೆಡ್ಡಿ, ವಿಧಾನಸಭೆ ಉಪಸಭಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News