ನ.22ರ ಮುಂಬೈ ಮೇಯರ್ ಚುನಾವಣೆಯ ಮೇಲೆ ಬಿಜೆಪಿ-ಶಿವಸೇನೆ ‘ವಿಚ್ಛೇದನ’ ಪರಿಣಾಮ ಬೀರಬಹುದು

Update: 2019-11-16 13:29 GMT

ಮುಂಬೈ, ನ.16: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಭಂಗವು ನ.22ರಂದು ನಡೆಯಲಿರುವ ಮುಂಬೈ ಮೇಯರ್ ಚುನಾವಣೆಯ ಮೇಲೆ ಪರಿಣಾಮವನ್ನು ಬೀರಬಹುದು.

 2017ರ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 227 ಸ್ಥಾನಗಳ ಪೈಕಿ ಶಿವಸೇನೆ 84 ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿಯು 82 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಬಿಜೆಪಿಯ ಬೆಂಬಲದಿಂದಾಗಿ ಶಿವಸೇನೆಯ ನಾಯಕ ವಿಶ್ವನಾಥ ಮಹಾಡೇಶ್ವರ ಅವರು ಮೇಯರ್ ಆಗಿ ಆಯ್ಕೆಯಾಗಿದ್ದರು.

ಮಹಾಡೇಶ್ವರ ಅವರ ಎರಡೂವರೆ ವರ್ಷಗಳ ಅಧಿಕಾರಾವಧಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತಾದರೂ ಅಕ್ಟೋಬರ್‌ನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನವಂಬರ್‌ವರೆಗೆ ವಿಸ್ತರಿಸಲಾಗಿತ್ತು.

ಹಾಲಿ ಶಿವಸೇನೆಯು ಎಂಎನ್‌ಎಸ್‌ನಿಂದ ಪಕ್ಷಾಂತರಗೊಂಡಿರುವ ಆರು ಜನರು ಸೇರಿದಂತೆ 94 ಕಾರ್ಪೊರೇಟರ್‌ಗಳನ್ನು ಹೊಂದಿದ್ದರೆ,ಬಿಜೆಪಿ 83,ಕಾಂಗ್ರೆಸ್ 28,ಎನ್‌ಸಿಪಿ ಎಂಟು,ಎಸ್‌ಪಿ ಆರು,ಎಐಎಂಐಎಂ ಎರಡು ಮತ್ತು ಎಂಎನ್‌ಎಸ್ ಓರ್ವ ಕಾರ್ಪೊರೇಟರ್‌ಗಳನ್ನು ಹೊಂದಿವೆ.

ಮೇಯರ್ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷವು ಈವರೆಗೆ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ ಪ್ರಭಾತ ಲೋಧಾ ಹೇಳಿದ್ದರೆ,ತಮ್ಮ ಪಕ್ಷವು ಕಾಂಗ್ರೆಸ್ ಜೊತೆ ಮಾತುಕತೆ ನಡೆಸುತ್ತಿದೆ ಮತ್ತು ಶೀಘ್ರವೇ ನಿರ್ಧಾರವೊಂದನ್ನು ಕೈಗೊಳ್ಳಲಾಗುವುದು ಎಂದು ಎಸ್‌ಪಿಯ ರಯೀಸ್ ಶೇಖ್ ತಿಳಿಸಿದ್ದಾರೆ.

ಕಾಂಗ್ರೆಸ್ ಮತ್ತು ಎನ್‌ಸಿಪಿ ವಿವಿಧ ಸಮಿತಿಗಳಲ್ಲಿ ಹುದ್ದೆಗಳನ್ನು ಕೇಳಬಹುದು ಮತ್ತು ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದರೆ ಪ್ರತಿಪಕ್ಷ ನಾಯಕನ ಹುದ್ದೆಯನ್ನು ಪಡೆಯಬಹುದು ಎಂದು ಆರ್‌ಟಿಐ ಅರ್ಜಿಗಳ ಮೂಲಕ ಬಿಎಂಸಿಯ ಹಲವಾರು ಹಗರಣಗಳನ್ನು ಬಯಲಿಗೆಳೆದಿರುವ ಸಾಮಾಜಿಕ ಕಾರ್ಯಕರ್ತ ಅನಿಲ ಗಲಗಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈ ಮೇಯರ್ ಹುದ್ದೆಯು ಪ್ರತಿ ಎರಡು ವರ್ಷಗಳಿಗೆ ಸಾಮಾನ್ಯ ಮತ್ತು ಮೀಸಲು ವರ್ಗಗಳ ನಡುವೆ ಬದಲಾಗುತ್ತಿರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News