ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಸಾವು: ಕಾರ್ಖಾನೆ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Update: 2019-11-16 14:52 GMT

ಬೆಂಗಳೂರು, ನ.16: ಬೆಂಗಳೂರು ನಗರದ ನಾಗಸಂದ್ರ ಬಳಿಯ ದೊಡ್ಡ ಬಿದರಕಲ್ಲು ಪ್ರದೇಶದಲ್ಲಿರುವ ಫೋನಿಕ್ಸ್ ವಾಶ್ಟೆಕ್ ಗಾರ್ಮೆಂಟ್ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಬಿ.ಸಿ.ಕಂಠಿ ಮತ್ತು ರಮೇಶ್ ಎಂಬ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. 

ಈ ಘಟನೆ ಕುರಿತಂತೆ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ ಗಾರ್ಮೆಂಟ್ ಕಾರ್ಖಾನೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಕಾರ್ಖಾನೆಯ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದೆಮೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಕಾರ್ಖಾನೆ ಮತ್ತು ಬಾಯ್ಲರ್‌ಗಳ, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಶುಕ್ರವಾರ ರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅವಘಡ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದಾರೆ.

ಅಲ್ಲದೆ 1948ರ ಕಾರ್ಖಾನೆಗಳ ಕಾಯಿದೆಯ ಪ್ರಕಾರ ಕಾರ್ಖಾನೆಯಲ್ಲಿ ಉಡುಪು ಒಗೆಯುವ ಘಟಕಕ್ಕೆ ಪರವಾನಗಿ ಪಡೆದಿರಲಿಲ್ಲ. ಅಂತೆಯೇ, ಬಾಯ್ಲರುಗಳ ಕಾಯಿದೆಯಡಿ ಬಾಯ್ಲರ್ ನೋಂದಣಿಯಾಗಿರಲಿಲ್ಲ, ಬಾಯ್ಲರ್ ಕಾರ್ಯ ನಿರ್ವಹಣೆಯಲ್ಲಿ ಗುಣಮಟ್ಟದ ಕಾರ್ಯನಿರ್ವಹಣಾ ವಿಧಾನವನ್ನು ಅನುಸರಿಸದ ಹಾಗೂ ಅತ್ಯಧಿಕ ಒತ್ತಡದ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿನ ಬಾಯ್ಲರ್ ಸ್ಫೋಟಗೊಂಡಿದೆ ಎಂಬ ವಿಚಾರವು ತಪಾಸಣಾ ಸಮಯದಲ್ಲಿ ಬೆಳಕಿಗೆ ಬಂದಿದೆ ಎಂದು ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಅಪರ ನಿರ್ದೇಶಕ ಟಿ.ಆರ್. ಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News