ಬೆಂಗಳೂರು: ಬಾಲಕಾರ್ಮಿಕರು ಸೇರಿ 30 ಜೀತದಾಳುಗಳ ರಕ್ಷಣೆ

Update: 2019-11-16 16:16 GMT

ಬೆಂಗಳೂರು, ನ.16: ಕಾರ್ಮಿಕರ ಕಾನೂನು ಉಲ್ಲಂಘಿಸಿ, ತೋಟದಲ್ಲಿ ಕೂಡಿಹಾಕಿ ದುಡಿಸಿಕೊಳ್ಳುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿ ಡಾ.ಎಂ.ಜಿ.ಶಿವಣ್ಣ ನೇತೃತ್ವದ ಅಧಿಕಾರಿಗಳ ತಂಡ, ಹೊರ ರಾಜ್ಯಗಳ ಬಾಲಕಾರ್ಮಿಕರು ಸೇರಿದಂತೆ 30 ಮಂದಿ ಜೀತದಾಳುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಸರ್ಜಾಪುರ ಹೋಬಳಿಯ ಕುಗೂರು ಗ್ರಾಮದ ವ್ಯಾಪ್ತಿಯ ನೀಲಗಿರಿ ತೋಪಿನಲ್ಲಿ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿತು. ಬಿಹಾರ ಸೇರಿ ವಿವಿಧ ರಾಜ್ಯಗಳಿಂದ ಕರೆತಂದು ಕೆಲಸ ಮಾಡಿಸಿಕೊಂಡು ಹೊರಗೆ ಬಿಡದೆ ಒತ್ತೆಯಾಳಾಗಿಟ್ಟುಕೊಂಡಿದ್ದ ತೋಟದ ಮೇಲೆ ಆನೇಕಲ್ ತಹಶೀಲ್ದಾರ್ ದಿನೇಶ್, ಪೊಲೀಸರು ಹಾಗೂ ರೆವಿನ್ಯೂ ಅಧಿಕಾರಿಗಳು ದಾಳಿ ಮಾಡಿ ಕಾರ್ಮಿಕರನ್ನು ಬಂಧ ಮುಕ್ತಗೊಳಿಸಿದ್ದಾರೆ.

ಹಂತ ಹಂತವಾಗಿ ಹೆಚ್ಚಿನ ಸಂಬಳ ನೀಡುವ ಆಮಿಷವೊಡ್ಡಿ ಈ ಕೆಲಸಕ್ಕೆ ಕರೆತರಲಾಗಿದೆ. ಬಳಿಕ ಹೆಚ್ಚಿನ ಸಂಬಳ ನೀಡದೆ, ಸೂಕ್ತ ಸವಲತ್ತು ಕಲ್ಪಿಸದೆ ಅವರನ್ನು ಜೈಲಿನ ಮಾದರಿ ಬಂಧನದಲ್ಲಿಟ್ಟು ಕೆಲಸ ಮಾಡಿಸಲಾಗುತ್ತಿತ್ತು ಎನ್ನಲಾಗಿದೆ.

ಡಾ.ಶಿವಣ್ಣ ನೇತೃತ್ವದಲ್ಲಿ ದಾಳಿ: ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ನಗರ ದಕ್ಷಿಣ ಉಪ ವಿಭಾಗಾಧಿಕಾರಿ ಡಾ.ಶಿವಣ್ಣ ನಿರ್ದೇಶನದಂತೆ ಬೆಂಗಳೂರು ರೆವಿನ್ಯೂ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಸೇರಿದಂತೆ ಪೊಲೀಸರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಎಲ್ಲರನ್ನೂ ತೋಟದಲ್ಲಿ ಕೂಡಿ ಹಾಕಿ, ಬೆಳಗ್ಗೆಯಿಂದ ರಾತ್ರಿಯವರೆಗೂ ದುಡಿಸಿಕೊಳುತ್ತಿದ್ದರು. ಶೌಚಾಲಯ ಇಲ್ಲ, ಮಲಗಲು ಆಗದ ಪರಿಸ್ಥಿತಿ, ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಕಾಲ ಕಳೆಯುವ ಬಾಲ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕರ ಸವಲತ್ತುಗಳ ಸ್ಥಿತಿ ಕಂಡು ಅಧಿಕಾರಿಗಳೇ ಬೆಚ್ಚಿದ್ದಾರೆ.

ಅಧಿಕಾರಿಗಳ ತಂಡ ಕಂಡ ತಕ್ಷಣವೇ ಕೆಲ ಮಕ್ಕಳು ಗಾಬರಿಯಿಂದ ಓಡಿ ಹೋಗಲು ಮುಂದಾಗಿದ್ದಾರೆ. ಕನ್ನಡ ಭಾಷೆ ಬಾರದ ಅವರು ಇಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಉಪವಿಭಾಗಾಧಿಕಾರಿ ಡಾ.ಶಿವಣ್ಣ, ಮಕ್ಕಳನ್ನು ಮಾತನಾಡಿಸಿ ನಾವು ಅಧಿಕಾರಿಗಳು ನಿಮ್ಮನ್ನು ರಕ್ಷಣೆ ಮಾಡಲು ಬಂದಿದ್ದೇವೆ ಎಂದು ಸಾಂತ್ವನ ಹೇಳಿ ಸಮಾಧಾನ ಪಡಿಸಿದರು.

ಈ ವೇಳೆ ಕಾರ್ಮಿಕರು, ಹೊರಗೆ ಹೋಗಲಾಗುತ್ತಿಲ್ಲ. ನಮ್ಮನ್ನು ಕರೆ ತಂದು ಹಗಲು-ರಾತ್ರಿ ಎನ್ನದೇ ಒಂದೇ ಸಮನೆ ದುಡಿಸಿಕೊಳ್ಳುತ್ತಿದ್ದರು. ನಿತ್ಯ ಬೈಗುಳ, ತಿಂಗಳಿಗೆ ಸರಿಯಾಗಿ ಸಂಬಳ ನೀಡದೆ ಸತಾಯಿಸುತ್ತಿದ್ದರು. ಹಾಗೆಯೇ ಊರಿಗೆ ಹೋಗಬೇಕೆಂದರೂ ರಜೆ ನೀಡದೆ ದುಡಿಸಿಕೊಳುತ್ತಿದ್ದರು ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

ಕಾನೂನು ಬಾಹಿರ ಈ ಕೃತ್ಯವೆಸಗಿರುವ ಮಾಲಕರ ವಿರುದ್ಧ ಕ್ರಮ ಜರುಗಿಸಿ, ಕಾರ್ಮಿಕರನ್ನು ಜೀತಮುಕ್ತಗೊಳಿಸಲಾಗುವುದು ಎಂದು ಡಾ.ಶಿವಣ್ಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News