ಆಡಳಿತ ಸುವ್ಯವಸ್ಥೆ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಅಪಾರ: ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್

Update: 2019-11-16 17:50 GMT

ಬೆಂಗಳೂರು, ನ.16: ಮಾಧ್ಯಮಗಳಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದ್ದು, ಆಡಳಿತ ಸುವ್ಯವಸ್ಥೆಯಲ್ಲಿ ಪತ್ರಿಕೆಗಳ ಪಾತ್ರ ಹೆಚ್ಚಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಶನಿವಾರ ಜ್ಞಾನಭಾರತಿ ಆವರಣದ ಪ್ರೊ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಮಾಧ್ಯಮ ಪಾತ್ರ ಅಪಾರವಾದುದಾಗಿದೆ. ಅಂದಿನಿಂದ ಇಂದಿನವರೆಗೂ ಎಲ್ಲ ವಿಷಯದಲ್ಲಿಯೂ ಪತ್ರಿಕಾ ಮಾಧ್ಯಮ ಸಾಕಷ್ಟು ಪರಿಣಾಮ ಬೀರಿದೆ. ಇಂದು ಪ್ರಜಾಪ್ರಭುತ್ವ ಉಳಿದುಕೊಳ್ಳಲು ಮುದ್ರಣ ಮಾಧ್ಯಮದ ಪಾತ್ರ ಸಾಕಷ್ಟಿದೆ ಎಂದು ನುಡಿದರು.

ಇತ್ತೀಚಿಗೆ ಪ್ರಧಾನಮಂತ್ರಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ತುದಿಗಾಲಿನಲ್ಲಿ ನಿಂತಿದ್ದರು. ಆದರೆ, ಪತ್ರಿಕಾ ಮಾಧ್ಯಮದ ಮೂಲಕ ಈ ಒಪ್ಪಂದದಿಂದಾಗುವ ಅನಾಹುತಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದರು. ಅದರ ಪರಿಣಾಮ ಪ್ರಧಾನಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದೇ, ಹಿಂದೆ ಸರಿದರು. ಈ ರೀತಿಯಾಗಿ ಜಾಗೃತಿ ಮೂಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಮಾಧ್ಯಮಗಳು ಸಹಕಾರಿಯಾಗಿವೆ ಎಂದರು.

ಮಾಧ್ಯಮಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಸರಕಾರಗಳೇ ಉರುಳುತ್ತವೆ ಎಂದ ಅವರು, ಪ್ರತಿಕಾಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ರಾಜಕಾರಣಿ ಮತ್ತು ಸರಕಾರಗಳನ್ನು ಎಚ್ಚರಿಸಿ ಆಡಳಿತ ಸುಧಾರಣೆಗೆ ಶ್ರಮಿಸುತ್ತದೆ. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪತ್ರಿಕಾ ಸ್ವಾತಂತ್ರಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ್ದ ಅಂದಿನ ಸರಕಾರ 1977ರಲ್ಲಿ ನಡೆದ ಚುನಾವಣೆಯಲ್ಲಿ ಸರಕಾರವೇ ಪತನವಾಯಿತು ಎಂದು ಅವರು ನೆನಪಿಸಿಕೊಂಡರು.

ಪತ್ರಕರ್ತ ರವಿ ಹೆಗಡೆ ಮಾತನಾಡಿ, ಸಿಕ್ಕಸಿಕ್ಕಿದ್ದನ್ನೆಲ್ಲಾ ಬರೆಯುವುದು ವರದಿಗಾರಿಕೆ ಅಲ್ಲ. ಯಾರಿಗೂ ಕಾಣದ ಸತ್ಯವನ್ನು ಹೆಕ್ಕಿ ತೆಗೆಯುವುದು, ಚಾಕಚಕ್ಯತೆಯನ್ನು ವರದಿಗಾರರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಓದುಗರ ಆಸಕ್ತಿ, ಅಭಿರುಚಿ, ಓದುವ ಶೈಲಿ ಬದಲಾಗಿದ್ದು, ಕಾಲಕ್ಕನುಗುಣವಾಗಿ ವರಿಗಾರಿಕೆಯಲ್ಲೂ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ಆದರೆ, ಪ್ರಸ್ತುತ ಮೈಕ್ ರಿಪೋರ್ಟಿಂಗ್ ಹಾವಳಿ ಅಧಿಕವಾಗಿದೆ. ವರದಿಗಾರಿಕೆ ಸುಲಭವಾಗಿದೆ ಎಂದ ಅವರು, ಈ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಎನ್.ಭೃಂಗೀಶ್, ವಿವಿ ಕುಲ ಸಚಿವ ಬಿ.ಕೆ.ರವಿ, ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ, ವಾರ್ತಾ ಇಲಾಖೆಯ ಆಯುಕ್ತ ಸಿದ್ದರಾಮಪ್ಪ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಕ್ಯಾಪ್ಟನ್ ಪಿ.ಮಣಿವಣ್ಣನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News