ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸದ ಮಳಿಗೆಗಳಿಗೆ ನೋಟಿಸ್ ಜಾರಿ

Update: 2019-11-16 18:00 GMT

ಬೆಂಗಳೂರು, ನ.16: ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಮಳಿಗೆಗಳ ಮಾಲಕರಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಲಾಗುತ್ತಿದೆ.

ನಗರದಲ್ಲಿ 47,406 ವಾಣಿಜ್ಯ ಉದ್ದಿಮೆಗಳಿದ್ದು, ಬಿಬಿಎಂಪಿ ಅಧಿಕಾರಿಗಳು ಇದುವರೆಗೂ 20,689 ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಅದರಲ್ಲಿ 7734 ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಮಾಡಿದ್ದು, 13,575 ಮಳಿಗೆಗಳಲ್ಲಿ ಕನ್ನಡ ಪದ ಬಳಕೆ ಮಾಡದೇ ನಿರ್ಲಕ್ಷಿಸಿದ್ದಾರೆ.

ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಪದ ಬಳಕೆ ಮಾಡುವಂತೆ ಇತ್ತೀಚಿಗೆ ಪಾಲಿಕೆಯ ತಿಳಿಸಿದ್ದರೂ, ಅಂಗಡಿಗಳ ಮಾಲಕರು ಇದಕ್ಕೆ ಕಿವಿ ಕೊಟ್ಟಿಲ್ಲ. ಇದೀಗ ಕನ್ನಡ ಪದ ಬಳಕೆ ಮಾಡದವರಿಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಲಾಗಿದೆ.

ನಗರದಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳ ನಾಮಫಲಕಗಳನ್ನು ಪರಿಶೀಲನೆ ನಡೆಸಲಾಗುವುದು. ಎಲ್ಲ ಮಳಿಗೆಗಳ ಮಾಲಕರಿಗೆ ನ.30 ರೊಳಗೆ ಕನ್ನಡ ಕಡ್ಡಾಯವಾಗಿ ಬಳಸುವಂತೆ ಮೇಯರ್ ಗೌತಮ್ ಕುಮಾರ್ ಘೋಷಣೆ ಮಾಡಿದ್ದರು. ಅದನ್ನು ಪಾಲಿಸುವಂತೆ ಸೂಚನೆ ನೀಡಲಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನ.30 ರ ಬಳಿಕ ನಾಮಫಲಕಗಳಲ್ಲಿ ಕನ್ನಡ ಪದ ಬಳಕೆ ಮಾಡದೇ ಇರುವಂತಹ ವಾಣಿಜ್ಯ ಮಳಿಗೆಗಳ ಪರವಾನಗಿ ನವೀಕರಣ ರದ್ಧು ಮಾಡಲು ಬಿಬಿಎಂಪಿ ಮುಂದಾಗಿದೆ. ಮೇಯರ್ ಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಯುಕ್ತ ಅನಿಲ್ ಕುಮಾರ್ ಸೂಚನೆ ನೀಡಿದ್ದು, ಕನ್ನಡ ಭಾಷೆ ಕಡ್ಡಾಯಗೊಳಿಸಿ ಆದೇಶ ಜಾರಿ ಮಾಡಿದ್ದರು.

ಪಾಲಿಕೆಯ ಆಯುಕ್ತರ ಸೂಚನೆಯ ಮೇರೆಗೆ ಪಾಲಿಕೆ ಅಧಿಕಾರಿಗಳು ನಗರದಾದ್ಯಂತ ಎಲ್ಲೆಡೆ ನಾಮಫಲಕಗಳ ಪರಿಶೀಲನೆ ಮಾಡುತ್ತಿದ್ದಾರೆ. ಕನ್ನಡ ಪದ ಬಳಕೆ ಮಾಡದ ಮಳಿಗೆಗಳಿಗೆ ಕಟ್ಟೆಚ್ಚರ ನೀಡುತ್ತಿದ್ದಾರೆ. ಒಟ್ಟಾರೆ. ನ.30 ರೊಳಗೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಮುಂದಾಗಿರುವ ಬಿಬಿಎಂಪಿ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News