ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲಿ: ರವಿಕೃಷ್ಣಾರೆಡ್ಡಿ

Update: 2019-11-16 18:01 GMT

ಬೆಂಗಳೂರು, ನ.16: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂಬುದು ನಮ್ಮ ಆಶಯ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೂ ಮನವಿ ಮಾಡಲಾಗಿದೆ ಎಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಶನಿವಾರ ನಗರದ ಕೆ.ಆರ್.ಪುರದಲ್ಲಿರುವ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಚುನಾವಣಾ ಆಯೋಗ ಕೇವಲ ಶಾಂತಿಯುತ ಮತದಾನ ಮಾಡುವುದರಲ್ಲಿ ಆಸಕ್ತಿ ಹೊಂದಿದೆಯೇ ಹೊರತು, ಚುನಾವಣೆ ಸಂದರ್ಭದಲ್ಲಿ ಎಷ್ಟೇ ಅಕ್ರಮ, ಮೋಸ, ಅವ್ಯವಹಾರ ನಡೆದರೂ ಅದನ್ನು ತಡೆಯುವ ಮನಸ್ಥಿತಿ ಹೊಂದಿಲ್ಲ ಎಂದು ದೂರಿದರು.

ಸ್ಥಳೀಯ ಶಾಸಕರು ಹಾಗೂ ಆಡಳಿತ ನಡೆಸುವವರಿಗೆ ಸಹಕಾರಿಯಾಗುವಂತೆಯೇ ಪ್ರತಿಯೊಬ್ಬ ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ಬಲಾಢ್ಯ ಅಭ್ಯರ್ಥಿ, ಪಕ್ಷಕ್ಕೆ ಸಹಕಾರ ನೀಡುವುದು ಕಂಡು ಬಂದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸೀರೆ, ಹಣ, ಹೆಂಡ ಸಿಗುತ್ತಿದೆ. ಆದರೆ, ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

ಕೆಲವು ದಿನಗಳ ಹಿಂದೆ ಈ ಭಾಗದಲ್ಲಿ ಸಾವಿರಾರು ಜನರಿಗೆ ಬಾಡೂಟ ಹಾಕುವ ವ್ಯವಸ್ಥೆ ಮಾಡಲಾಗಿತ್ತು. ಅಕ್ರಮ ನಡೆಯುವಾಗ ಅದನ್ನು ತಡೆಯಲು ಚುನಾವಣಾ ಆಯೋಗದ ಅಧಿಕಾರಿಗಳು ಹೋಗುವುದಿಲ್ಲ. ಎಲ್ಲ ಮುಗಿದ ನಂತರ ತಿಪ್ಪೇ ಸಾರಿಸಲು ಮಾತ್ರ ಹೋಗುತ್ತಾರೆ ಎಂದು ರವಿಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕ್ಷೇತ್ರದ ಮತದಾರರು, ನಮ್ಮ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಎಲ್ಲೇ ಚುನಾವಣಾ ಅಕ್ರಮಗಳು ನಡೆದರೂ ಅದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಮಾಡಿ. ಇದರಿಂದ, ಅಕ್ರಮ ಎಸಗುವವರ ಬಣ್ಣ ಬಯಲು ಮಾಡಬಹುದು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News