ಸಕಾಲದಲ್ಲಿ ಖಾತಾ ವರ್ಗಾವಣೆ ಅರ್ಜಿಗಳೇ ಅಧಿಕ ಸಲ್ಲಿಕೆ !

Update: 2019-11-16 18:19 GMT

ಬೆಂಗಳೂರು, ನ.16: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ಯೋಜನೆ ಅಡಿ ಖಾತಾ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚು ಸಲ್ಲಿಕೆಯಾಗಿದ್ದು, ನ.12ರವರೆಗೆ ಖಾತಾ ವರ್ಗಾವಣೆ ಸಂಬಂಧ 2107 ಅರ್ಜಿಗಳು ಸಲ್ಲಿಕೆಯಾಗಿವೆ.

ಅರ್ಜಿದಾರರಿಂದ ಹಣ ಸಲ್ಲಿಕೆಯಾಗದ ಕಾರಣದಿಂದ 1928 ಅರ್ಜಿಗಳು ಬಾಕಿ ಉಳಿದಿವೆ. ಇವುಗಳಲ್ಲಿ 179 ಅರ್ಜಿಗಳು ಅಧಿಕಾರಿಗಳ ಬಳಿ ಇದ್ದು, ಇದನ್ನು ಅಧಿಕಾರಿಗಳೇ ವಿಲೇವಾರಿ ಮಾಡಬೇಕಿದೆ. ವಿವಿಧ ವಿಭಾಗಗಳ ಅರ್ಜಿಗಳು ಕಾಲಮಿತಿಯೊಳಗೆ ವಿಲೇವಾರಿಯಾಗುತ್ತಿದ್ದು, ಕಂದಾಯ ವಿಭಾಗದ ಅರ್ಜಿಗಳು ವಿವಿಧ ಕಾರಣಗಳಿಂದ ತಡವಾಗಿ ವಿಲೇವಾರಿಯಾಗುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವು ಅರ್ಜಿಗಳು ಕೋರ್ಟ್‌ನಲ್ಲಿ ವ್ಯಾಜ್ಯ ಹೊಂದಿರುವುದರಿಂದ ಶೀಘ್ರ ವಿಲೇವಾರಿ ಮಾಡಲಾಗುತ್ತಿಲ್ಲ ಎನ್ನಲಾಗಿದೆ. ಈಗ ಸಕಾಲ ಯೋಜನೆಯಡಿ 91 ಇಲಾಖೆಯ 1,126 ಸೇವೆಗಳನ್ನು ಕಲ್ಪಿಸಲಾಗುತ್ತದೆ. ವಿವಿಧ ಸೇವೆಗಳಿಗೆ 7, 14 ಮತ್ತು 21 ದಿನಗಳ ಅವಧಿ ನಿಗದಿ ಮಾಡಲಾಗಿದೆ. ಸಕಾಲ ಯೋಜನೆಯಡಿ ನಿಗದಿತ ಅವಧಿಯಲ್ಲಿ ಸೇವೆ ನೀಡದಿದ್ದಲ್ಲಿ 20 ರೂ.ಗಳಿಂದ 500 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.

ಸಹಾಯವಾಣಿ ನೆರವು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ಯೋಜನೆಯಡಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಉದ್ದೇಶದಿಂದ ಬಿಬಿಎಂಪಿ ಸಹಾಯವಾಣಿಯ ನೆರವು ಪಡೆದುಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ ಹೇಳಿದ್ದಾರೆ.

ಹರ್ಷ ಗುಪ್ತಾ ನೇತೃತ್ವದಲ್ಲಿ ಪ್ರತಿ ತಿಂಗಳು ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿಗೆ ಪರಿಶೀಲನಾ ಸಭೆ ನಡೆಸುತ್ತಿದ್ದು, ಬಿಬಿಎಂಪಿಯ ಸಹಾಯವಾಣಿ ಮೂಲಕವೂ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಅರ್ಜಿ ವಿಲೇವಾರಿ ವಿಳಂಬ ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅದೇ ರೀತಿ ಸಕಾಲ ಯೋಜನೆಗೆ ಸಂಬಂಧಿಸಿದ ದೂರುಗಳಿದ್ದರೆ ಸಹಾಯವಾಣಿ ಸಂಖ್ಯೆ 080-22660000ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News