ದೇಶದಲ್ಲಿ ಜಾತಿ ವಿಕಾಸದ ಕ್ರಿಯೆಗಳು ಅಧಿಕವಾಗುತ್ತಿವೆ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2019-11-17 14:58 GMT

ಬೆಂಗಳೂರು, ನ.17: ಜಾತಿ ವಿನಾಶದ ಬದಲಾಗಿ ಜಾತಿ ವಿಕಾಸದ ಕ್ರಿಯೆಗಳು ಹೆಚ್ಚಾಗುತ್ತಿದೆ. ಇದು ಅಂಬೇಡ್ಕರ್‌ರವರ ಆಶಯವಾಗಿರಲಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕಲಾ ಕಾಲೇಜಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಆಯೋಜಿಸಿದ್ದ ಮೀಸಲಾತಿ: ನೂರು ವರ್ಷ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಜಾತಿಯ ಗತಿಶೀಲತೆ ಬದಲಾಗುತ್ತಿದೆ. ಶೂದ್ರರನ್ನೂ ಒಳಗೊಂಡಂತೆ ಶೋಷಿತ ಸಮುದಾಯಗಳಲ್ಲಿ ವಿಘಟನೆ ಮತ್ತು ಶ್ರೇಣೀಕರಣ ಉಂಟಾಗುತ್ತಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ತಂದ ದೇವರಾಜ ಅರಸು ಆಶಯವೂ ಜಾತಿಗಳ ವಿಕಾಸವಾಗಿರಲಿಲ್ಲ. ಅರಸು ಮೀಸಲಾತಿ ಎಲ್ಲ ಜಾತಿಗಳಿಗೂ ಅನ್ವಯಸುತ್ತದೆ. ಆದರೆ, ಕೇಂದ್ರದ ಮೀಸಲಾತಿ ಮೇಲ್ಜಾತಿಯ ಆರ್ಥಿಕ ಬಡತನವುಳ್ಳವರಿಗೆ ಮಾತ್ರ ಕಲ್ಪಿಸಿರುವ ಮೀಸಲಾತಿಯಾಗಿದೆ. ಈ ಪ್ರಕ್ರಿಯೆ ಜಾತಿ ವಿನಾಶದ ಬದಲು ಜಾತಿ ವಿಕಾಸದೆಡೆಗೆ ಹಾಗೂ ಜಾತಿ ಪ್ರಚೋದನೆ ಕಡೆಗೆ ಹೋಗುತ್ತಿದೆ ಎಂದು ನುಡಿದರು.

ಇತ್ತೀಚಿನ ದಿನಗಳಲ್ಲಿ ಮೇಲ್ಜಾತಿಗಳು ಉಪಜಾತಿಗಳನ್ನು ಒಗ್ಗೂಡಿಸಿಕೊಂಡು ಒಗ್ಗಟ್ಟಾಗುತ್ತಿದ್ದರೆ, ಕೆಳ ಸಮುದಾಯಗಳು ಉಪಜಾತಿಗಳ ನಡುವೆ ಬಿರುಕು ಮೂಡುತ್ತಿದೆ. ಈ ವೈರುಧ್ಯವನ್ನು ಗುರುತಿಸದಿದ್ದರೆ ಮೀಸಲಾತಿಯನ್ನು ವಿಶ್ಲೇಷಿಸಲು ಕಷ್ಟಸಾಧ್ಯ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಸರಕಾರಗಳು ಜಾತಿ ಆಧಾರಿತ ಜಯಂತಿಗಳಿಗೆ ಹೆಚ್ಚು ಒತ್ತು ನೀಡುತ್ತಿವೆ. ಅಲ್ಲಿಯೂ ಆಯಾ ಜಾತಿಯವರಿಗಷ್ಟೇ ಪ್ರಾಧ್ಯಾನತೆ ನೀಡಲಾಗುತ್ತಿದೆ. ಜಾತಿಯನ್ನಿಟ್ಟುಕೊಂಡು ಜಯಂತಿ ಮಾಡುವುದು, ಜಾತಿ ಮಠಗಳನ್ನು ಪೋಷಣೆ ಮಾಡುವುದು ಮತ್ತಷ್ಟು ಜಾತೀಯತೆಯನ್ನು ಪ್ರಚೋದಿಸುವಂತಾಗುತ್ತದೆ. ಇದರಿಂದ ಸಾಮಾಜಿಕ ನ್ಯಾಯ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಶತಶತಮಾನಗಳಿಂದ ಈ ದೇಶದಲ್ಲಿ ಮೀಸಲಾತಿ ಇತ್ತು. ಶಿಕ್ಷಣ, ದೇವಾಲಯ, ಮನೆಯ ಪಡಸಾಲೆ, ಅಡುಗೆ ಮನೆ, ಕೆರೆಯ ನೀರು, ಬೀದಿಗಳು ಕೆಲವರಿಗೆ ಮೀಸಲಾಗಿದ್ದವು. ಸ್ವಾತಂತ್ರ ಸ್ಪರ್ಶದ ಹಕ್ಕೂ ಮೀಸಲಾತಿಗೆ ಒಳಪಟ್ಟಿತ್ತು. ಮನುವಾದಿ ಮೀಸಲಾತಿ ಈ ದೇಶದಲ್ಲಿ ಅಸ್ತಿತ್ವದಲ್ಲಿ ಇತ್ತು. ನಮ್ಮ ಸಂವಿಧಾನ ಮನುವಾದಿ ಮೀಸಲಾತಿ ಜಾಗಕ್ಕೆ ಮಾನವತಾ ಮೀಸಲಾತಿ ತಂದಿತು. ಮಾನವತಾ ಮೀಸಲಾತಿ ತರುವ ಮುಖೇನ ಶ್ರೇಣೀಕೃತವಾಗಿ ಶೋಷಣೆಗೆ ಒಳಗಾದವರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವುದರ ಮುಖಾಂತರವಾಗಿ ಸಮಾನತೆ ತರಬೇಕೆಂಬ ಆಶಯವೇ ಸಂವಿಧಾನದ ಮೂಲವಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಶಾಸ್ತ್ರಕ್ಕೆ ಸಿಗದ ಸಂವೇದನೆ. ಆ ಸಂವೇದನೆ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ಸಮಾನತೆ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕಾದ ಆಶಯವನ್ನು ಹೊಂದಿದೆ. ಸಂವಿಧಾನವನ್ನು ಕೇವಲ ಮೀಸಲಾತಿಗೆ ಸೀಮಿತವಾಗಿಸುವ ಪ್ರವೃತ್ತಿ ಸರಿಯಲ್ಲ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಗುಣಮಟ್ಟಕ್ಕೆ ವಿರುದ್ಧವಾದುದು ಎಂಬ ಕಲ್ಪನೆ ಇದೆ. ಮೀಸಲಾತಿ ಗುಣಮಟ್ಟಕ್ಕೆ ವಿರುದ್ಧವಾದುದು ಅನ್ನುವವರಿಗೆ ನನ್ನದೊಂದು ಪ್ರಶ್ನೆ. ನಮ್ಮಲ್ಲಿ ಮೆರಿಟ್ ಪಡೆದುಕೊಂಡಿರುವ ಪ್ರೊಫೆಸರ್‌ಗಳು, ಉನ್ನತ ಹುದ್ದೆಗಳನ್ನು ಅಲಂಕರಿಸಿರುವವರು ಇದ್ದಾರೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರವೇ, ಜಗತ್ತಿನ ಮೊದಲ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯಗಳು ಯಾಕೆ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ದೇಶದಲ್ಲಿನ ಮಾಧ್ಯಮ ಕ್ಷೇತ್ರದ ಕುರಿತು ಚಿಂತಕ ಯೋಗೇಂದ್ರ ಯಾದವ್ ನಡೆಸಿದ ಸಮೀಕ್ಷೆಯಲ್ಲಿ ನಮ್ಮಲ್ಲಿನ ಪ್ರತಿಷ್ಠಿತ 300 ಜನ ಹಿರಿಯ ಪತ್ರರಲ್ಲಿ ಒಬ್ಬರೂ ಸಹ ಶೋಷಿತ ಸಮುದಾಯಕ್ಕೆ ಸೇರಿದವರಿಲ್ಲ. ಇನ್ನುಳಿದಂತೆ ಕೇಂದ್ರೀಯ ವಿ.ವಿ. ಗಳು, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಐಐಟಿಗಳಲ್ಲಿ ಸಾಮಾನ್ಯ ವರ್ಗ, ಎಸ್ಸಿ-ಎಸ್ಟಿ, ಒಬಿಸಿ ಸಮುದಾಯದವರಿಗೆ ಎಷ್ಟು ಮಾನ್ಯತೆ ಸಿಕ್ಕಿದೆ ಎಂದು ನೋಡಬೇಕಿದೆ ಎಂದರು.

ವಸಾಹತುಶಾಹಿ ವಿರುದ್ಧ ಹೋರಾಡಿದ ಗಾಂಧಿ, ವರ್ಣಾಶ್ರಮ ವಿರುದ್ಧ ಹೋರಾಡಿದ ಅಂಬೇಡ್ಕರ್ ಇಬ್ಬರೂ ಮುಖ್ಯ. ಅವರಿಬ್ಬರ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು, ಅವರ ಅನುಯಾಯಿಗಳಲ್ಲಿ ಪರಸ್ಪರ ವಿರೋಧ, ಅಸಹನೆ ಇರಬಹುದು. ಆದರೆ, ಇವರಿಬ್ಬರನ್ನೇ ಯಾಕೆ ಗುರಿ ಮಾಡಲಾಗುತ್ತಿದೆ. ಯಾವ ಮೂಲಭೂತವಾದಿಗಳು ಇವರನ್ನು ಗುರಿ ಮಾಡುತ್ತಿದ್ದಾರೋ, ಅವರೇ ವೇದಿಕೆಗಳಲ್ಲಿ ಹಾಡಿ ಹೊಗಳುತ್ತಿದ್ದಾರೆ ಎಂದು ಅವರು ಹೇಳಿದರು.

‘ದೇಶದಲ್ಲಿ ಜಾತಿ ಪದ್ಧತಿ, ಜಾತಿವಾದ ಜೀವಂತವಾಗಿರುವಷ್ಟು ಕಾಲ ಮೀಸಲಾತಿ ಇರಬೇಕು. ಜಾತಿವಾದ ಶ್ರೇಷ್ಠ ಹಾಗೂ ಕನಿಷ್ಠ, ತಾರತಮ್ಯವನ್ನು ಪ್ರತಿಪಾದಿಸುತ್ತದೆ. ಜಾತಿವಾದದ ಶೋಷಣೆಯ ಸೂಕ್ಷ್ಮಗಳು ಇರುವವರೆಗೂ ಮೀಸಲಾತಿ ಅಗತ್ಯ. ಮೆರಿಟ್ ಎಂಬ ಮಿಥ್ಯೆ ಅಡಿಯಲ್ಲಿ ಮೀಸಲಾತಿ ವಿರೋಧಿಸುವ ಪ್ರವೃತ್ತಿ ಅಪ್ಪಟ ಹುಸಿಯಾಗಿದೆ. 70 ವರ್ಷಗಳಲ್ಲಿ ಅನೇಕ ಸುಧಾರಣೆಗಳು ನಡೆದಿವೆ. ಆದರೆ, ಮೀಸಲಾತಿಯ ಕಾರಣಕ್ಕಾಗಿ ಅಸಹನೆ ಪಡುವಷ್ಟರ ಮಟ್ಟಿಗೆ ಉನ್ನತ ಹುದ್ದೆಗಳು ಸಿಕ್ಕಿವೆಯೇ ಎಂಬುದನ್ನು ಯೋಚಿಸಬೇಕು’

-ಪೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News