ಯುದ್ಧಪರಾಧಿ ಸೇನಾಧಿಕಾರಿಗಳಿಗೆ ಟ್ರಂಪ್ ಕ್ಷಮಾದಾನ

Update: 2019-11-17 17:57 GMT

ವಾಶಿಂಗ್ಟನ್, ನ.17: ಅಫ್ಘಾನಿಸ್ತಾನದಲ್ಲಿ ಯುದ್ಧಾಪರಾಧಗಳನ್ನು ಎಸಗಿದ ಆರೋಪ ಎದುರಿಸುತ್ತಿರುವ ಇಬ್ಬರು ಅಮೆರಿಕನ್ ಸೇನಾಧಿಕಾರಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಷಮಾದಾನ ನೀಡಿದ್ದಾರೆ ಹಾಗೂ ಇರಾಕ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಎಸಗಿದ ಕೃತ್ಯಗಳಿಗಾಗಿ ಹಿಂಬಡ್ತಿ ಪಡೆದ ಅಮೆರಿಕ ನೌಕಾಪಡೆಯ ಸೀಲ್ ಪ್ಲಟೂನ್‌ನ ಕಮಾಂಡರ್ ರ್ಯಾಂಕ್ ಅನ್ನು ಮರುಸ್ಥಾಪಿಸಲಾಗಿದೆ.

ಅಮೆರಿಕ ಅಧ್ಯಕ್ಷರ ಈ ಕ್ರಮವು ಸೇನಾನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ಯುದ್ಧರಂಗದಲ್ಲಿ ನಡೆಯುವ ದೌರ್ಜನ್ಯಗಳನ್ನು ಸಹಿಸಿಕೊಳ್ಳಲಾಗುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತದೆ ಎಂದು ಕೆಲವು ವಿಶ್ಲೇಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ‘‘ಇನ್ನೂರು ವರ್ಷಗಳಿಗೂ ಹೆಚ್ಚು ಸಮಯಗಳಿಂದ ರಾಷ್ಟ್ರಾಧ್ಯಕ್ಷರುಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ಯೋಧರು ಸೇರಿದಂತೆ ದೇಶಕ್ಕಾಗಿ ಸೇವೆ ಸಲ್ಲಿಸಿದವರಿಗೆ ಎರಡನೆ ಅವಕಾಶವನ್ನು ಒದಗಿಸಲು ತಮ್ಮ ಅಧಿಕಾರವನ್ನು ಬಳಸಿಕೊಂಡಿದ್ದಾರೆ. ಈ ಸುದೀರ್ಘ ಇತಿಹಾಸವನ್ನು ಗಮನದಲ್ಲಿರಿಸಿಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ’’ ಎಂದು ಶ್ವೇತಭವನದ ಹೇಳಿಕೆಯೊಂದು ತಿಳಿಸಿದೆ.

 ‘‘ಅಮೆರಿಕ ಅಧ್ಯಕ್ಷರು ಸೇನೆಯ ಮುಖ್ಯ ಕಮಾಂಡರ್ ಕೂಡಾ ಆಗಿದ್ದಾರೆ ಹಾಗೂ ಅವರು ಇಂತಹ ವಿಷಯಗಳಲ್ಲಿ ನಿರ್ಣಯ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ’’ಎಂದು ಅದು ತಿಳಿಸಿದೆ.

2013ರಲ್ಲಿ ಅಮೆರಿಕನ್ ಸೇನಾಧಿಕಾರಿ ಲೋರೆನ್ಸ್ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತದಲ್ಲಿ ಗಸ್ತು ತಿರುಗು ತ್ತಿದ್ದಾಗ, ಮೋಟಾರ್ ಸೈಕಲ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರ ಮೇಲೆ ಆಕ್ರಮವಾಗಿ ಗುಂಡು ಹಾರಿಸಲು ಆದೇಶಿಸಿದ್ದಾರೆಂದು ವಿಚಾರಣೆಯ ವೇಳೆ ತನಿಖಾಧಿಕಾರಿಗಳು ಆಪಾದಿಸಿದ್ದರು.

ಅಮೆರಿಕ ಸೇನೆಯ ಗ್ರೀನ್ ಬೆರೆಟ್ ಪಡೆಯ ಯೋಧ ಗೊಲ್‌ಸ್ಟೆನ್ 2010ರಲ್ಲಿ ಅಫ್ಘಾನಿಸ್ತಾನದಲ್ಲಿ ನಿಯೋಜಿತನಾಗಿದ್ದಾಗ ಅಫ್ಘಾನ್ ನಾಗರಿಕನೊಬ್ಬನನ್ನು ಹತ್ಯೆಗೈದ ಆರೋಪವನ್ನು ಆತನ ವಿರುದ್ಧ ಕಳೆದ ವರ್ಷ ಹೊರಿಸಲಾಗಿತ್ತು.

ಸೀಲ್ ಪಡೆಯ ಪ್ಲಟೂನ್ ಮುಖ್ಯಸ್ಥನಾದ ಗಾಲ್‌ಘರ್ 2017ರಲ್ಲಿ ಇರಾಕ್‌ನಲ್ಲಿ ನಿಯೋಜಿತನಾಗಿದ್ದಾಗ ವಿವಿಧ ಯುದ್ದಾಪರಾಧಗಳನ್ನು ಎಸಗಿದ ಆರೋಪಗಳನ್ನು ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಆತನಿಗೆ ಹಿಂಬಡ್ತಿ ನೀಡಲಾಗಿತ್ತು.

ಕಳೆದ ಜುಲೈನಲ್ಲಿ ಸೆರೆಸಿಕ್ಕಿದ ಗಾಯಾಳು ಐಸಿಸ್ ಉಗ್ರನನ್ನು ಕತ್ತು ಸೀಳಿ ಕೊಂದು, ಆರೋಪದಲ್ಲಿ ಗಾಲ್‌ಘರ್‌ನನ್ನು ದೋಷಮುಕ್ತಗೊಳಿಸಿತ್ತು. ಆದರೆ ಆತ ಅಕ್ರಮವಾಗಿ ಮೃತಪಟ್ಟ ಸೆರೆಯಾಳುವಿನ ಶವದೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಕ್ಕಾಗಿ ಆತನಿಗೆ ಹಿಂಬಡ್ತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News