ಕಾಶ್ಮೀರ: ಶ್ರೀನಗರದ ಸೆಂಟೌರ್ ಹೊಟೇಲ್‌ನಲ್ಲಿ ಬಂಧನದಲ್ಲಿದ್ದ 34 ನಾಯಕರ ವರ್ಗಾವಣೆ

Update: 2019-11-17 18:41 GMT

ಹೊಸದಿಲ್ಲಿ, ನ. 17: ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಿ 370 ರದ್ದುಗೊಳಿಸಿದ ಬಳಿಕ ಗೃಹ ಬಂಧನದಲ್ಲಿ ಇರಿಸಲಾಗಿದ್ದ 34 ಮಂದಿ ನಾಯಕರನ್ನು ತೀವ್ರ ಚಳಿಯ ಹಿನ್ನೆಲೆಯಲ್ಲಿ ನೂತನ ಸ್ಥಳಕ್ಕೆ ವರ್ಗಾಯಿಸಲಾಗಿದೆ.

 ಪುತ್ರಿಯ ಮನವಿಯ ಹಿನ್ನೆಲೆಯೆಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಚಾಶ್ಮೆ ಶಾಹಿ ಅತಿಥಿ ಗೃಹದಿಂದ ಶ್ರೀನಗರದ ಲಾಲ್‌ಚೌಕಕ್ಕೆ ವರ್ಗಾಯಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

 ಈಗ ಶ್ರೀನಗರದ ಸೆಂಟೌರ್ ಹೊಟೇಲ್‌ನಲ್ಲಿ ಬಂಧನದಲ್ಲಿ ಇರಿಸಲಾಗಿದ್ದ ಎಲ್ಲ 34 ನಾಯಕರನ್ನು ಪೊಲೋ ಕ್ರೀಡಾಂಗಣದ ಸಮೀಪ ಇರುವ ಎಂಎಲ್‌ಎ ಹಾಸ್ಟೆಲ್‌ಗೆ ವರ್ಗಾಯಿಸಲಾಗಿದೆ. ಸೆಂಟೌರ್ ಹೊಟೇಲ್‌ನಲ್ಲಿ ಉಷ್ಣತೆ ಹೆಚ್ಚಿಸುವ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಂಧನದಲ್ಲಿರುವ ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿಯ ರಾಜಕೀಯ ನಾಯಕರು ಹಾಗೂ ಇತರ ಪ್ರಮುಖ ಸಾಮಾಜಿಕ ಹೋರಾಟಗಾರ ರ ಆರೋಗ್ಯದ ಮೇಲೆ ಚಳಿ ಈಗಾಗಲೇ ಪರಿಣಾಮ ಬೀರಲು ಆರಂಭಿಸಿರುವುದರಿಂದ ಈ ನಿರ್ಧಾರ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರಕಾರ ಆಗಸ್ಟ್ 5ರಂದು ವಿಧಿ 370ನ್ನು ರದ್ದುಗೊಳಿಸಿದ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ರಾಜಕೀಯ ನಾಯಕರು ಹಾಗೂ ಹೋರಾಟಗಾರರನ್ನು ದಾಲ್ ಲೇಕ್‌ನ ದಂಡೆಯಲ್ಲಿರುವ ಸೆಂಟೌರ್ ಹೊಟೇಲ್‌ನಲ್ಲಿ ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News