ಸರ್ವಪಕ್ಷಗಳ ಸಭೆಯಲ್ಲಿ ಆರ್ಥಿಕ ಹಿಂಜರಿತ, ಕಾಶ್ಮೀರದಲ್ಲಿ ಬಂಧನ ಪ್ರಕರಣ ಪ್ರಸ್ತಾಪಿಸಿದ ವಿಪಕ್ಷಗಳು

Update: 2019-11-17 18:45 GMT

ಹೊಸದಿಲ್ಲಿ, ನ.17: ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಆರ್ಥಿಕ ಹಿಂಜರಿತ, ನಿರುದ್ಯೋಗ ಸಮಸ್ಯೆ ಹಾಗೂ ಕಾಶ್ಮೀರದಲ್ಲಿ ಮುಖಂಡರ ಗೃಹ ಬಂಧನ ಮುಂದುವರಿಕೆ ಸಹಿತ ಹಲವು ಪ್ರಮುಖ ವಿಷಯಗಳನ್ನು ವಿಪಕ್ಷಗಳು ಪ್ರಸ್ತಾವಿಸಿವೆ.

ಸಂಸತ್ತಿನ ಚಳಿಗಾಲದ ಅಧಿವೇಶನ ನ.18ರಂದು ಆರಂಭವಾಗಲಿದ್ದು ಡಿ. 13ರವರೆಗೂ ಮುಂದುವರಿಯಲಿದೆ. ಜನಸಾಮಾನ್ಯರಿಗೆ ಸಂಬಂಧಿಸಿದ ನಿರುದ್ಯೋಗ ಸಮಸ್ಯೆ, ಆರ್ಥಿಕ ಬಿಕ್ಕಟ್ಟು ಇತ್ಯಾದಿ ವಿಷಯಗಳನ್ನು ಸಂಸತ್ತಿನಲ್ಲಿ ಎತ್ತಲಿದ್ದೇವೆ. ಇದನ್ನು ಸರ್ವಪಕ್ಷಗಳ ಸಭೆಯಲ್ಲೂ ಪ್ರಸ್ತಾವಿಸಿದ್ದೇವೆ. ಅಲ್ಲದೆ ಫಾರೂಕ್ ಅಬ್ದುಲ್ಲಾರ ಗೃಹ ಬಂಧನವನ್ನೂ ಖಂಡಿಸಿದ್ದೇವೆ. ಅವರಿಗೆ ಸಂಸತ್ತಿನ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಓರ್ವ ಸಂಸದರನ್ನು ಕಾನೂನು ಬಾಹಿರವಾಗಿ ಬಂಧನದಲ್ಲಿಡಲಾಗಿದೆ. ಫಾರೂಕ್ ಅಬ್ದುಲ್ಲಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸಭೆಯಲ್ಲಿ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಆ ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ , ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಸಹಿತ ಹಲವು ಮುಖಂಡರನ್ನು ಸರಕಾರ ಗೃಹ ಬಂಧನದಲ್ಲಿರಿಸಿದೆ.

 ಸಂಸದೀಯ ವ್ಯವಹಾರಗಳ ಸಚಿವಾಲಯ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದು 37 ಪಕ್ಷಗಳ ಮುಖಂಡರು ಭಾಗವಹಿಸಿದ್ದರು ಎಂದು ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಸದನದ ನೀತಿ ನಿಯಮದ ಚೌಕಟ್ಟಿನೊಳಗೆ ಯಾವುದೇ ವಿಷಯವನ್ನೂ ಚರ್ಚಿಸಲು ಸರಕಾರ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿರುವುದಾಗಿ ಸಚಿವರು ತಿಳಿಸಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸರಕಾರ 28 ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿತ್ತು. ಆದರೆ ಈ ಬಾರಿ ಎನ್‌ಡಿಎಯ ಹಳೆಯ ಮಿತ್ರಪಕ್ಷಗಳಲ್ಲಿ ಒಂದಾದ ಶಿವಸೇನೆ ವಿಪಕ್ಷ ಸ್ಥಾನದಲ್ಲಿ ಕೂರಲು ಬಯಸಿರುವುದು ಸರಕಾರಕ್ಕೆ ಹಿನ್ನಡೆಯಾಗಿದೆ.

ಎನ್‌ಡಿಯ ಮೈತ್ರಿಕೂಟಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನೂ ಸರಕಾರದ ಮುಂದೆ ಪ್ರಸ್ತಾವಿಸಲಿದ್ದೇವೆ ಎಂದು ಎಲ್‌ಜೆಪಿ ಪಕ್ಷದ ಅಧ್ಯಕ್ಷ ರಾಮವಿಲಾಸ್ ಪಾಸ್ವಾನ್‌ರ ಪುತ್ರ ಚಿರಾಗ್ ಪಾಸ್ವಾನ್‌ಸ ಹೇಳಿದ್ದಾರೆ. ಪೌರತ್ವ(ತಿದ್ದುಪಡಿ) ಮಸೂದೆ ಸಹಿತ 27 ಮಸೂದೆಗಳು ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಧಾರ್ಮಿಕ ಕಿರುಕುಳದಿಂದ ಬಾಂಗ್ಲಾ, ಪಾಕಿಸ್ತಾನ ಮತ್ತು ಅಪಘಾನಿಸ್ತಾನ ದೇಶಬಿಟ್ಟು ಓಡಿಬಂದಿರುವ ಹಿಂದು, ಜೈನರು, ಕ್ರಿಶ್ಚಿಯನ್ನರು, ಬೌದ್ಧರು ಹಾಗೂ ಫಾರ್ಸಿಗಳಿಗೆ ಭಾರತದ ಪೌರತ್ವ ನೀಡುವ ಮಸೂದೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News