ಶಾಸಕನಿಗೆ ಸೆರೆಸಿಕ್ಕ 'ಲಾಡೇನ್' ಹೃದಯಾಘಾತದಿಂದ ಸಾವು !

Update: 2019-11-18 03:59 GMT
ಫೋಟೊ : timesofindia

ಗುವಾಹತಿ: ಅಸ್ಸಾಂನ ಗೋಪಾಲಪುರ ಜಿಲ್ಲೆಯಲ್ಲಿ ಐದು ಮಂದಿಯನ್ನು ಬಲಿಪಡೆದು ಕೊನೆಗೆ ಶಾಸಕನ ಕೈಗೆ ಸೆರೆ ಸಿಕ್ಕ ’ಲಾಡೇನ್’ ಕೆಲ ದಿನಗಳಲ್ಲೇ ಮೃತಪಟ್ಟಿದೆ.

"ಪ್ರಾಥಮಿಕ ವರದಿಗಳಿಂದ ತಿಳಿದು ಬಂದಂತೆ ಈ ಹಂತಕ ಆನೆ ಹೃದಯಾಘಾತದಿಂದ ಮೃತಪಟ್ಟಿದೆ. ವಿವರವಾದ ಮರಣೋತ್ತರ ಪರೀಕ್ಷೆ ವರದಿ ನಿರೀಕ್ಷಿಸಲಾಗಿದೆ" ಎಂದು ಮಂಗಲದೋಯಿ ವಿಭಾಗೀಯ ಅರಣ್ಯ ಅಧಿಕಾರಿ ಬಿ.ವಿ.ಸಂದೀಪ್ ಪ್ರಕಟಿಸಿದ್ದಾರೆ.

"ಆನೆಯ ಆರೋಗ್ಯ ಸ್ಥಿತಿಯ ಬಗ್ಗೆ ತೀವ್ರ ನಿಗಾ ಇರಿಸಲಾಗಿತ್ತು. ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿತ್ತು. ಜತೆಗೆ ಸಹಜ ನಡವಳಿಕೆ ಪ್ರದರ್ಶಿಸುತ್ತಿತ್ತು. ರವಿವಾರ ಮುಂಜಾನೆ 4 ಗಂಟೆ ವೇಳೆಗೆ ಅಲ್ಪ ಆಹಾರವನ್ನೂ ನೀಡಲಾಗಿತ್ತು" ಎಂದು ಅವರು ವಿವರಿಸಿದ್ದಾರೆ.

ಬಂಧನದ ಬಳಿಕ ಕೃಷ್ಣ ಎಂದು ಮರುನಾಮಕರಣ ಮಾಡಲಾದ ಆನೆ ಮುಂಜಾನೆ 5.45ರ ವೇಳೆಗೆ ಕೊನೆಯುಸಿರೆಳೆದಿದೆ ಎಂದು ಪಶುತಜ್ಞ ಕೌಶಲ್ ಕುಮಾರ್ ಶರ್ಮಾ ಹೇಳಿದ್ದಾರೆ. ಆನೆಯ ಹೃದಯಭಾಗದಲ್ಲಿ ನಾಕ್ರೋಟಿಕ್ ಬ್ಯಾರಿಯರ್ಸ್‌ (ಗಾಯ ಅಥವಾ ರೋಗದಿಂದ ಕೋಶ ಅಥವಾ ಅಂಗಾಂಶಗಳ ಸಾವು) ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

"ಆನೆಯ ಹೃದಯ ಸ್ಥಿತಿ ಕ್ಷೀಣಿಸಿತ್ತು ಹಾಗೂ ಒತ್ತಡ ಇತ್ತು. ದೇಹದಲ್ಲಿ ಹಲವು ಗಾಯಗಳಿದ್ದವು. ಹೃದಯ ಕಾರ್ಯ ನಿರ್ವಹಣೆ ದುರ್ಬಲವಾಗಿತ್ತು. ಸೆರೆ ಹಿಡಿಯುವ ಸಂಬಂಧ ಒತ್ತಡ ಕೂಡಾ ಹೆಚ್ಚಿರುವ ಸಾಧ್ಯತೆ ಇದೆ" ಎಂದು ವಿವರಿಸಿದ್ದಾರೆ.

ಗೋಪಾಲಪುರ ಜಿಲ್ಲೆಯ ಕನ್ಯಾಕುಚಿ ಮೀಸಲು ಅರಣ್ಯದಲ್ಲಿ ಸೂತಿಯಾ ಶಾಸಕ ಪದ್ಮಾ ಹಜಾರಿಕಾ ಈ ಆನೆಯನ್ನು ನ. 11ರಂದು ಮತ್ತು ಬರಿಸುವ ಔಷಧ ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News