ಪಿಯು ಉಪನ್ಯಾಸಕರಿಂದ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ

Update: 2019-11-18 18:43 GMT

ಬೆಂಗಳೂರು, ನ.18: ವೇತನ ತಾರತಮ್ಯ ಸರಿಪಡಿಸಬೇಕು, 2 ನೆ ಹೆಚ್ಚುವರಿ ವೇತನ ಭಡ್ತಿ ನೀಡಬೇಕು, ಕಾಲ್ಪನಿಕ ವೇತನ ಭಡ್ತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಿಯು ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಮೌಲ್ಯಮಾಪನ ಬಹಿಷ್ಕರಿಸಲು ಮುಂದಾಗಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗಳು ಇನ್ನೂ ಆರಂಭವಾಗಿಲ್ಲ. ಇದರ ನಡುವೆಯೇ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿರುವ ಉಪನ್ಯಾಸಕರು, ವಿವಿಧ 19 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ. ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಪಿಯು ಇಲಾಖೆಗೆ ಈಗಾಗಲೇ ಮನವಿಯನ್ನು ಸಲ್ಲಿಸಲಾಗಿದೆ.

ಎರಡನೆ ಹೆಚ್ಚುವರಿ ವೇತನ ಭಡ್ತಿ, 16 ಗಂಟೆಗಳ ಬೋಧನಾವಧಿ ಮುಂದುವರಿಕೆ ಸೇರಿದಂತೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನ.28 ರಂದು ರಾಜ್ಯದ ಎಲ್ಲ ಜಿಲ್ಲಾ ಕಚೇರಿಗಳ ಎದುರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದ್ದಾರೆ.

ಮಾ.4 ರಿಂದ 23ರವರೆಗೆ ಪರೀಕ್ಷೆ: ದ್ವಿತೀಯ ಪಿಯುಸಿಯ 2019-20ನೆ ಸಾಲಿನ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು, ಮಾ.4 ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಸುಮಾರು 5-6 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಅದು ನಿರ್ಧರಿಸಲಿದೆ. ಸುಮಾರು 40 ಮೌಲ್ಯಮಾಪನ ಕೇಂದ್ರಗಳಲ್ಲಿ 18 ಸಾವಿರ ಉಪನ್ಯಾಸಕರಿಂದ ಮೌಲ್ಯಮಾಪನ ನಡೆಯುತ್ತದೆ.

ರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಪರೀಕ್ಷೆಗಳು ಆರಂಭವಾಗುವ ಮೊದಲೇ ಸಚಿವರು ಈ ಸಂಬಂಧ ಸಭೆ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಮೌಲ್ಯಮಾಪನ ಬಹಿಷ್ಕರಿಸುತ್ತೇವೆ.

- ತಿಮ್ಮಯ್ಯ ಪುರ್ಲೆ, ರಾಜ್ಯಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News