ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 102 ನೇ ಜನ್ಮ ದಿನ: ಪ್ರಣವ್ ಮುಖರ್ಜಿ, ಸಿಂಗ್, ಸೋನಿಯಾ ಪುಷ್ಪ ನಮನ

Update: 2019-11-19 05:13 GMT
ಫೋಟೊ: ANI

ಹೊಸದಿಲ್ಲಿ, ನ.19: ಮಾಜಿ ಪ್ರಧಾನಿ  ದಿವಂಗತ ಇಂದಿರಾ ಗಾಂಧಿ ಅವರ 102 ನೇ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಮಾಜಿ ಅಧ್ಯಕ್ಷ ಪ್ರಣಬ್ ಮುಖರ್ಜಿ ಸೇರಿದಂತೆ ಹಲವು  ನಾಯಕರು ಮಂಗಳವಾರ  ಇಂದಿರಾ ಗಾಂಧಿ ಅವರ ಸಮಾಧಿ ಇರುವ ಶಕ್ತಿ ಸ್ಥಳಕ್ಕೆ ತೆರಳಿ  ಪುಷ್ಪ ನಮನ  ಸಲ್ಲಿಸಿದರು..

ಮಾಜಿ ಪ್ರಧಾನಿ ಇಂದಿರಾ ಗಾಂಧಿಜಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ

‘ಐರನ್ ಲೇಡಿ’ ಎಂದೂ ಖ್ಯಾತರಾಗಿದ್ದ ಇಂದಿರಾ ಗಾಂಧಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುತ್ರಿ. ಭಾರತದ ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ ಮತ್ತು ಸುಮಾರು 15 ವರ್ಷಗಳ ಕಾಲ, ಮೂರು ಅವಧಿಗಳಲ್ಲಿ ಅಧಿಕಾರ ವಹಿಸಿಕೊಂಡರು, ಅವರು  17 ವರ್ಷಗಳ ಕಾಲ ಅಧಿಕಾರದಲ್ಲಿದ್ದರು.

1917 ರ ನವೆಂಬರ್ 19 ರಂದು ಅಲಹಾಬಾದ್‌ನಲ್ಲಿ ಜನಿಸಿದ ಇಂದಿರಾ ಗಾಂಧಿ ಅವರು 1947-1964ರ ನಡುವೆ ಜವಾಹರಲಾಲ್ ನೆಹರೂ  ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಅವರ  ವೈಯಕ್ತಿಕ ಸಹಾಯಕರಾಗಿದ್ದರು,  ನೆಹರೂ 1964 ರಲ್ಲಿ ನಿಧನದ ನಂತರ ರಾಜ್ಯಸಭೆಗೆ ಆಯ್ಕೆಯಾದರು ಮತ್ತು ನಂತರ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ (ಐ ಮತ್ತು ಬಿ) ಸಚಿವರಾದರು. 1966 ರಲ್ಲಿ, ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ಶಾಸ್ತ್ರಿ ಅಕಾಲಿಕವಾಗಿ ನಿಧನರಾದ ನಂತರ ಅವರು ಭಾರತದ ಮೂರನೇ ಪ್ರಧಾನಿಯಾದರು.

ಇಂಧಿರಾ ಗಾಂಧಿ  ಮೊದಲ ಅಧಿಕಾರಾವಧಿಯು ಹಲವಾರು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಯಿತು, ಅದು ಅವರನ್ನು ‘ಐರನ್ ಲೇಡಿ’ ಎಂದು ಕರೆಯಲು ಕಾರಣವಾಯಿತು. 1971 ರಲ್ಲಿ, ಭಾರತವು ಯುದ್ಧದಲ್ಲಿ ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿತು, ಅದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು ಮತ್ತು 1974 ರಲ್ಲಿ  ಭಾರತ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿತು. ಆದಾಗ್ಯೂ, ಜೂನ್ 1975 ರಲ್ಲಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು.  ಇದರಿಂದಾಗಿ ಹಲವು ಮಂದಿ  ವಿರೋಧ ಪಕ್ಷದ ನಾಯಕರು  ಜೈಲು ಸೆರಿದರು.

1977 ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು ಮತ್ತು  ಬಳಿಕ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅಧಿಕಾರ ಕಳೆದುಕೊಂಡರು.  ಆದಾಗ್ಯೂ, ಅವರು 1980 ರಲ್ಲಿ ಮೂರನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದರು. 1984 ರಲ್ಲಿ, ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗೆ (ಆಪರೇಷನ್ ಬ್ಲೂಸ್ಟಾರ್) ಆದೇಶಿಸಿದರು.  ಇದರಿಂದಾಗಿ ಕೊನೆಗೆ ಅವರು ತನ್ನ  ಸಿಖ್ ಅಂಗರಕ್ಷಕರ  ಗುಂಡಿಗೆ ಬಲಿಯಾದರು. ದೇಶಾದ್ಯಂತ ಸಿಖ್ ವಿರೋಧಿ ಗಲಭೆ ಉಂಟಾಗಿ  ಹಲವು ಮಂದಿ ಪ್ರಾಣ ಕಳೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News