ಶಬರಿಮಲೆಗೆ ತೆರಳುತ್ತಿದ್ದ 12 ವರ್ಷದ ಬಾಲಕಿಯನ್ನು ತಡೆದ ಪೊಲೀಸರು

Update: 2019-11-19 18:18 GMT

ಶಬರಿಮಲೆ, ನ. 19: ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆ ದೇವಾಲಯಕ್ಕೆ ತಂದೆಯೊಂದಿಗೆ ಆಗಮಿಸಿದ ಪುದುಚೇರಿಯ 12 ವರ್ಷದ ಬಾಲಕಿಯನ್ನು ಮಂಗಳವಾರ ಪಂಬಾದಿಂದ ಹಿಂದೆ ಕಳುಹಿಸಲಾಯಿತು.

ಮುಂಗಡ ಕಾಯ್ದಿರಿಸುವಿಕೆಯಲ್ಲಿ ಬಾಲಕಿಯ ಪ್ರಾಯವನ್ನು 10 ಎಂದು ನಮೂದಿಸಲಾಗಿತ್ತು. ಆದರೆ, ಮಹಿಳಾ ಪೊಲೀಸ್ ಅಧಿಕಾರಿ ಬಾಲಕಿಯ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅದರಲ್ಲಿ 12 ವರ್ಷ ಎಂದು ನಮೂದಾಗಿತ್ತು. ಆದುದರಿಂದ ಪಂಬಾದಿಂದ ದೇವಾಲಯಕ್ಕೆ ತೆರಳಲು ಬಾಲಕಿಗೆ ಅವಕಾಶ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬಾಲಕಿಯ ತಂದೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಲಾಯಿತು. ಅನಂತರ ಬಾಲಕಿಯ ತಂದೆ ಹಾಗೂ ಸಂಬಂಧಿಕರು ಮಾತ್ರ ದೇವಾಲಯಕ್ಕೆ ತೆರಳಿದರು ಎಂದು ಪೊಲೀಸರು ತಿಳಿಸಿದ್ದಾರೆ.

 ಶಬರಿಮಲೆ ದೇವಾಲಯಕ್ಕೆ ಆಗಮಿಸಿದ 10ರಿಂದ 50ರ ಒಳಗಿನ ಪ್ರಾಯ ಗುಂಪಿನ ಇಬ್ಬರು ಮಹಿಳೆಯರನ್ನು ಪೊಲೀಸರು ಸೋಮವಾರ ತಡೆದಿದ್ದರು. ಶನಿವಾರ ಆಂಧ್ರಪ್ರದೇಶದ ಕನಿಷ್ಠ 10 ಮಹಿಳೆಯರನ್ನು ಪೊಲೀಸರು ಹಿಂದೆ ಕಳುಹಿಸಿದ್ದರು. ಎರಡು ತಿಂಗಳ ಕಾಲದ ಮಂಡಲ-ಮಕರ ಬೆಳಕು ಯಾತ್ರೆಯ ಹಿನ್ನೆಲೆಯಲ್ಲಿ ನವೆಂಬರ್ 16ರಂದು ಶಬರಿಮಲೆ ದೇವಾಲಯ ತೆರೆಯಲಾಗಿತ್ತು.

ಶಬರಿಮಲೆ ದೇವಾಲಯ ಪ್ರವೇಶಿಸಲು ಎಲ್ಲ ಪ್ರಾಯ ಗುಂಪಿನ ಮಹಿಳೆಯರಿಗೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ 2018 ಸೆಪ್ಟಂಬರ್ 28ರಂದು ತೀರ್ಪು ನೀಡಿದ ಬಳಿಕ ಎಲ್‌ಡಿಎಫ್ ಸರಕಾರ ಅದನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿತ್ತು. ಇದನ್ನು ವಿರೋಧಿಸಿ ಕಳೆದ ವರ್ಷ ಸಂಘಪರಿಪಾರ ಹಾಗೂ ಬಿಜೆಪಿ ಪ್ರತಿಭಟನೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News